ನವದೆಹಲಿ: 2002ರ ಗುಜರಾತ್ ಗಲಭೆ ಕುರಿತಂತೆ ಆಧಾರರಹಿತ ಮಾಹಿತಿ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾದ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಜೂನ್ 25ರಂದು ಮುಂಬೈನಲ್ಲಿ ತೀಸ್ತಾ ಸೆಟಲ್ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ ತಂಡ ಬಂಧಿಸಿತ್ತು. ಈ ಮೊದಲು ಜಾಮೀನು ಕೋರಿ ತೀಸ್ತಾ ಸೆಟಲ್ವಾಡ್ ಅಹಮದಾಬಾದ್ ಸೆಷನ್ಸ್ ನ್ಯಾಯಾಲಯ ಹಾಗೂ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಸೆಷನ್ಸ್ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿತ್ತು. ನಂತರ ಹೈಕೋರ್ಟ್‌ಗೆ ಹೋಗಿದ್ದರು. ಆದರೆ, ಮಧ್ಯಂತರ ಜಾಮೀನಿನ ಯಾವುದೇ ಆದೇಶವನ್ನು ನೀಡದೇ ಹೈಕೋರ್ಟ್ ಅರ್ಜಿಯನ್ನು ಸುದೀರ್ಘ ಅವಧಿಗೆ ಮುಂದೂಡಿತ್ತು. ಹೀಗಾಗಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಇಂದು ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಯು.ಯು.ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್.ರವೀಂದ್ರ ಭಟ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠವು ಅಗತ್ಯ ಕಸ್ಟಡಿ ವಿಚಾರಣೆ ಪೂರ್ಣಗೊಂಡಿರುವುದರಿಂದ ಮಧ್ಯಂತರ ಜಾಮೀನಿನ ವಿಚಾರಣೆ ನಡೆಸಬೇಕಾಗಿತ್ತು. ಇದೇ ವೇಳೆ ಜಾಮೀನು ಅರ್ಜಿಯು ಗುಜರಾತ್ ಹೈಕೋರ್ಟ್‌ನಲ್ಲಿ ಇನ್ನೂ ಬಾಕಿ ಉಳಿದಿದೆ ಎಂಬುವುದನ್ನೂ ಗಮನಿಸಿದ ನ್ಯಾಯಪೀಠವು, ನಾವು ತೀಸ್ತಾ ಸೆಟಲ್ವಾಡ್ ಅವರಿಗೆ ಮಧ್ಯಂತರ ಜಾಮೀನು ನೀಡುತ್ತೇವೆ ಎಂದು ತಿಳಿಸಿತು.