ನವದೆಹಲಿ: 2012ರ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಸುಪ್ರೀಂಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ. 2015ರಲ್ಲಿ ಇಂದ್ರಾಣಿಯನ್ನು ಸಿಬಿಐ ಬಂಧಿಸಿತ್ತು.
ದಶಕದ ಹಿಂದೆ ನಡೆದ 24 ವರ್ಷದ ಯುವತಿ ಶೀನಾ ಬೋರಾ ಹತ್ಯೆ ಪ್ರಕರಣವು ಸಾಕಷ್ಟು ಸಂಚಲನ ಮೂಡಿಸಿತ್ತು. ಕಾರಿನಲ್ಲಿ ಇಂದ್ರಾಣಿ ಮುಖರ್ಜಿ ಮತ್ತು ಆಕೆಯ ಕಾರಿನ ಚಾಲಕ ಶ್ಯಾಮವರ್ ರೈ ಮತ್ತು ಮಾಜಿ ಪತಿ ಸಂಜೀವ್ ಖನ್ನಾ ಕತ್ತು ಹಿಸುಕಿ ಕೊಲೆ ಮಾಡಿದ್ದರು. ನಂತರ ಶೀನಾ ಶವ ಸುಟ್ಟುಹಾಕಿದ ಸ್ಥಿತಿಯಲ್ಲಿ ರಾಯಗಢ್ ಜಿಲ್ಲೆಯ ಅರಣ್ಯದಲ್ಲಿ ಪತ್ತೆಯಾಗಿತ್ತು.
ಶೀನಾ ಬೋರಾ ಇಂದ್ರಾಣಿ ಮುಖರ್ಜಿಯ ಮಗಳಾಗಿದ್ದಳು. ಆದರೆ, ಇಂದ್ರಾಣಿ ಮುಖರ್ಜಿಯ ಮೂರನೇ ಪತಿಯಾದ ಪೀಟರ್ ಮುಖರ್ಜಿಯ ಪುತ್ರ ರಾಹುಲ್ ಮುಖರ್ಜಿಯೊಂದಿಗೆ ಶೀನಾ ಸಂಬಂಧ ಹೊಂದಿದ್ದಳು. ಶೀನಾ ಬೋರಾ ಮತ್ತು ರಾಹುಲ್ ಮುಖರ್ಜಿ ವರಸೆಯಲ್ಲಿ ಸಹೋದರ ಸಂಬಂಧಿಗಳು ಆಗುತ್ತಿದ್ದರು. ಹೀಗಾಗಿ ಇಬ್ಬರ ಸಂಬಂಧದಿಂದ ಕೋಪಗೊಂಡು ಶೀನಾ ಬೋರಾಳನ್ನು ಹತ್ಯೆ ಮಾಡಿರುವ ಪ್ರಕರಣವಾಗಿದೆ.
ಈ ಪ್ರಕರಣದ ತನಿಖೆಯನ್ನು ಮೊದಲಿಗೆ ಮುಂಬೈ ಪೊಲೀಸರು ಕೈಗೊಂಡಿದ್ದರು. ನಂತರ 2015ರಿಂದ ಸಿಬಿಐಗೆ ತನಿಖೆ ಒಪ್ಪಿಸಲಾಗಿತ್ತು. ಅದೇ ವರ್ಷ ಸಿಬಿಐ ಇಂದ್ರಾಣಿ ಮುಖರ್ಜಿಯನ್ನು ಬಂಧಿಸಿತ್ತು. ಕಳೆದ ಆರೂವರೆ ವರ್ಷದಿಂದ ಜೈಲಿನಲ್ಲಿರುವ ಇಂದ್ರಾಣಿ ಮುಖರ್ಜಿ ತಿಂಗಳ ಹಿಂದೆಯಷ್ಟೇ ಶೀನಾ ಬೋರಾ ಬದುಕಿದ್ದು, ಕಾಶ್ಮೀರದಲ್ಲಿ ನೆಲೆಸಿದ್ದಾಳೆ ಎಂದು ಹೇಳಿ ಸಿಬಿಐಗೆ ಬರೆದ ಪತ್ರದಲ್ಲಿ ತಿಳಿಸಿದ್ದಳು.
ಇದನ್ನೂ ಓದಿ:ಕಾರ್ತಿ ಚಿದಂಬರಂ ಆಪ್ತ ಎಸ್.ಭಾಸ್ಕರ್ ರಾಮನ್ ಬಂಧಿಸಿದ ಸಿಬಿಐ