ನವದೆಹಲಿ:ಮಾರ್ಗದರ್ಶಿ ಚಿಟ್ ಫಂಡ್ ಪ್ರಕರಣದಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶದ ವಿರುದ್ಧ ಗಾದಿರೆಡ್ಡಿ ಯೂರಿ ರೆಡ್ಡಿ ಎಂಬವರು ಸಲ್ಲಿಸಿದ್ದ ವಿಶೇಷ ರಜಾಕಾಲದ ಅರ್ಜಿಯನ್ನು (ಎಸ್‌ಎಲ್‌ಪಿ) ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಷೇರುಗಳ ವರ್ಗಾವಣೆ ಆರೋಪದಡಿ ಮಾರ್ಗದರ್ಶಿ ಚಿಟ್ ಫಂಡ್ ಅಧ್ಯಕ್ಷರಾದ ರಾಮೋಜಿ ರಾವ್ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಶೈಲಜಾ ಕಿರಣ್ ವಿರುದ್ಧ ಆಂಧ್ರ ಸಿಐಡಿ ದಾಖಲಿಸಿದ ಪ್ರಕರಣದ ತನಿಖೆಗೆ ಈ ಹಿಂದೆ ಆಂಧ್ರ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
ಇದೇ ಸಂದರ್ಭದಲ್ಲಿ ಆಂಧ್ರ ಪ್ರದೇಶದ ಸಿಐಡಿ ಅಧಿಕಾರ ವ್ಯಾಪ್ತಿಯ ಕುರಿತು ಆಂಧ್ರ ಹೈಕೋರ್ಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಮಾರ್ಗದರ್ಶಿ ವಿರುದ್ಧ ಸಿಐಡಿ ದಾಖಲಿಸಿದ ಪ್ರಕರಣದ ವಿಚಾರಣೆಗೆ ನ್ಯಾಯಾಲಯವು 8 ವಾರಗಳ ತಡೆ ನೀಡಿತ್ತು. ಜಿ.ಯೂರಿ ರೆಡ್ಡಿ ಎಂಬವರು ಷೇರುಗಳ ವರ್ಗಾವಣೆ ಕುರಿತು ಮಾಡಿರುವ ಆರೋಪಗಳ ಬಗ್ಗೆ ನೀಡಿದ ದೂರಿನ ಆಧಾರದಡಿ ಮಾರ್ಗದರ್ಶಿ ಚಿಟ್ ಫಂಡ್ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಸಿಐಡಿ ಪ್ರಕರಣ ದಾಖಲಿಸಿಕೊಂಡಿತ್ತು ಎಂದು ಎಸ್‌ಎಲ್‌ಪಿಯಲ್ಲಿ ತಿಳಿಸಲಾಗಿದೆ.
ಜಿ.ಯೂರಿ ರೆಡ್ಡಿ ಅವರ ಎಸ್‌ಎಲ್‌ಪಿಯನ್ನು ಸೋಮವಾರ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮತ್ತು ನ್ಯಾಯಮೂರ್ತಿ ಸಂಜಯ್ ಕರೋಲ್ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿದೆ. ಯೂರಿ ರೆಡ್ಡಿ ಪರ ವಕೀಲ ಡಿ.ಶಿವರಾಮಿ ರೆಡ್ಡಿ ಅವರು ವಿಚಾರಣೆ ಆರಂಭವಾದ ಕೂಡಲೇ ವಾದ ಮಂಡಿಸಿ, ತಮ್ಮ ವಾದವನ್ನು ಆಲಿಸದೇ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ ಎಂದರು. ಪ್ರಕರಣದ ಸಿಐಡಿ ತನಿಖೆಗೆ ತಡೆ ನೀಡಲು ಹೈಕೋರ್ಟ್ ಸರಿಯಾದ ಕಾರಣಗಳನ್ನು ನೀಡಿಲ್ಲ ಎಂದು ಅವರು ನ್ಯಾಯಪೀಠಕ್ಕೆ ಹೇಳಿದರು.
ಈ ವೇಳೆ, ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಮಧ್ಯಪ್ರವೇಶಿಸಿ, ಎಷ್ಟು ದಿನಗಳವರೆಗೆ ತಡೆ ನೀಡಲಾಯಿತು ಎಂದು ಪ್ರಶ್ನಿಸಿದರು. ಎಂಟು ವಾರಗಳ ಕಾಲ ಎಂದು ವಕೀಲರು ಉತ್ತರಿಸಿದರು. ಆಗ ನ್ಯಾಯಾಧೀಶರು, ಈ ಪ್ರಕರಣ ಇನ್ನೂ ಹೈಕೋರ್ಟ್ ವ್ಯಾಪ್ತಿಯಲ್ಲಿದೆಯೇ ಎಂದು ಕೇಳಿದರು. ತಮ್ಮ ವಾದ ಆಲಿಸದೆ ಈ ಆದೇಶ ಹೊರಡಿಸಲಾಗಿದೆ ಎಂದು ವಕೀಲರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಹೃಷಿಕೇಶ್ ರಾಯ್, ಅರ್ಜಿದಾರರಿಗೆ ಹೈಕೋರ್ಟ್ ಮಧ್ಯಂತರ ಆದೇಶಗಳನ್ನು ನೀಡಿರುವುದನ್ನು ನೆನಪಿಸಿದರು. ಇದರ ಜೊತೆಗೆ ಮುಂದಿನ ವಿಚಾರಣೆ ಯಾವಾಗ ನಡೆಯಲಿದೆ ಎಂದು ಕೇಳಿದರು. ಡಿ.6ರಂದು ಎಂದು ವಕೀಲರು ತಿಳಿಸಿದರು. ಆಗ ನ್ಯಾಯಮೂರ್ತಿಗಳು, ಈ ಅರ್ಜಿಯನ್ನು ಹಿಂಪಡೆಯುವಿರಾ? ಅಥವಾ ವಜಾ ಆದೇಶವನ್ನು ದಾಖಲಿಸಲು ಬಯಸುವಿರಾ? ಎಂದರು. ಈ ಸಂದರ್ಭದಲ್ಲಿ ಎಸ್‌ಎಲ್‌ಪಿಯನ್ನು ಹಿಂಪಡೆಯುವುದಾಗಿ ಅರ್ಜಿದಾರರ ಪರ ವಕೀಲರು ತಿಳಿಸಿದರು. ನಂತರ ಹಿಂಪಡೆಯಲು ಅವಕಾಶ ನೀಡಿ ಪ್ರಕರಣ ವಜಾಗೊಳಿಸಿ ನ್ಯಾಯಾಧೀಶರು ಆದೇಶಿಸಿದರು.
ಈ ಹಿಂದೆ, ಪ್ರಕರಣದ ವಿಚಾರಣೆಯ ವೇಳೆ ಸಿಐಡಿ ಕಾರ್ಯವೈಖರಿ ಕುರಿತು ಹೈಕೋರ್ಟ್ ನೇರ ಪ್ರಶ್ನೆಗಳನ್ನು ಕೇಳಿತ್ತು. ಹೈದರಾಬಾದ್‌ನಲ್ಲಿ ಘಟನೆ ನಡೆದಿದೆ ಎಂದು ದೂರುದಾರರು ಹೇಳಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಲು ಎಪಿ ಸಿಐಡಿಗೆ ಹಕ್ಕಿದೆಯೇ? ತನಿಖೆ ನಡೆಸುವ ಅಧಿಕಾರ ನಿಮಗೆ ಎಲ್ಲಿಂದ ಬಂತು ಎಂದು ನ್ಯಾಯಾಲಯ ಪ್ರಶ್ನಿಸಿತ್ತು. ಯೂರಿ ರೆಡ್ಡಿ ಅವರೇ ಸಿಐಡಿಗೆ ನೀಡಿರುವ ದೂರಿನಲ್ಲಿ ಷೇರುಗಳ ವರ್ಗಾವಣೆಗೆ ಸಹಿ ಹಾಕಿರುವುದಾಗಿ ಹೇಳಿರುವುದನ್ನು ಹೈಕೋರ್ಟ್ ಗಮನಕ್ಕೆ ಬಂದಿದೆ. ಹೀಗಾದರೆ ಬೆದರಿಕೆ ಹಾಕಿ ಸಹಿ ಹಾಕಿಸಿರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿತ್ತು. ಮಾರ್ಗದರ್ಶಿ ವಿರುದ್ಧ ಪ್ರಕರಣ ದಾಖಲಿಸುವ ವಿಚಾರದಲ್ಲಿ ಸಿಐಡಿ ವ್ಯಾಪ್ತಿಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಅಂಶಗಳನ್ನು ಪರಿಗಣಿಸಿ, ಈ ಪ್ರಕರಣದ ವಿಚಾರಣೆಗೆ ನ್ಯಾಯಾಲಯವು 8 ವಾರಗಳ ಕಾಲಾವಧಿಯ ತಡೆ ನೀಡಿತ್ತು.
ಇದನ್ನೂ ಓದಿ:ವಾಹನಗಳಿಗಾಗಿರುವ ಹೆದ್ದಾರಿಗಳಲ್ಲಿ ಪಾದಚಾರಿಗಳು ಸಂಚರಿಸಬಾರದು: ಸುಪ್ರೀಂ ಕೋರ್ಟ್