ನವದೆಹಲಿ:ಸಶಸ್ತ್ರ ಪಡೆಗಳಲ್ಲಿ ನೇಮಕಾತಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ 'ಅಗ್ನಿಪಥ' ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಮುಂದಿನ ವಾರ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
ಬೇಸಿಗೆ ರಜೆ ಮುಗಿದು ಸುಪ್ರೀಂಕೋರ್ಟ್ ಪುನರಾರಂಭವಾದ ನಂತರ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ.ಮಹೇಶ್ವರಿ ಅವರ ರಜಾಕಾಲದ ಪೀಠವು ಅಗ್ನಿಪಥ್ ಸಂಬಂಧಿತ ಅರ್ಜಿಗಳನ್ನು ಸೂಕ್ತ ಪೀಠದ ಮುಂದೆ ಪಟ್ಟಿ ಮಾಡಲಿದೆ.
ಅಗ್ನಿಪಥ್ ಯೋಜನೆಯ ವಿರುದ್ಧ ಅರ್ಜಿ ಸಲ್ಲಿಸಿರುವ ವಕೀಲರೊಬ್ಬರು ಮಾತನಾಡಿ, "ಭಾರತೀಯ ವಾಯುಪಡೆಯ ಆಕಾಂಕ್ಷಿಗಳು ಈಗಾಗಲೇ ಸಾಕಷ್ಟು ತರಬೇತಿ ಪಡೆದಿದ್ದಾರೆ ಮತ್ತು ನೇಮಕಾತಿ ಪತ್ರಕ್ಕಾಗಿ ಕಾಯುತ್ತಿದ್ದಾರೆ. ಆದರೆ ಈಗ ಅವರ ವೃತ್ತಿಜೀವನವು 20 ವರ್ಷಗಳಿಂದ ಕೇವಲ ನಾಲ್ಕು ವರ್ಷಗಳಿಗೆ ಮೊಟಕುಗೊಳಿಸಲ್ಪಡುತ್ತಿದೆ" ಎಂದು ಹೇಳಿದರು.
“ಇದೊಂದು ತುರ್ತು ವಿಷಯ. ದಯವಿಟ್ಟು ಬೇಗನೆ ವಿಚಾರಣೆಗೆ ಪಟ್ಟಿ ಮಾಡಿ. ಹಲವಾರು ಸೇವಾ ಆಕಾಂಕ್ಷಿಗಳ ವೃತ್ತಿಜೀವನ ಅಪಾಯದಲ್ಲಿದೆ” ಎಂದು ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಈ ಯೋಜನೆಯನ್ನು ಪ್ರಶ್ನಿಸಿ ಪಿಐಎಲ್ ಸಲ್ಲಿಸಿರುವ ವಕೀಲ ಎಂ.ಎಲ್.ಶರ್ಮಾ, "ತರಬೇತಿ ಪಡೆದ 70,000 ಕ್ಕೂ ಹೆಚ್ಚು ಆಕಾಂಕ್ಷಿಗಳು ಕೋವಿಡ್ ಸಾಂಕ್ರಾಮಿಕ ಆರಂಭವಾಗುವುದಕ್ಕಿಂತಲೂ ಮೊದಲಿನಿಂದ ನೇಮಕಾತಿ ಪತ್ರಕ್ಕಾಗಿ ಕಾಯುತ್ತಿದ್ದರು. ಆದರೆ ಈಗ ಅವರ ವೃತ್ತಿಜೀವನವು ಮೊಟಕಾಗುತ್ತಿರುವಂತೆ ಕಾಣಿಸುತ್ತಿದೆ" ಎಂದರು.