ಖಾಂದ್ವಾ (ಮಧ್ಯಪ್ರದೇಶ): ಆರನೇ ತರಗತಿ ಪರೀಕ್ಷೆಯಲ್ಲಿ ವಿಚಿತ್ರ ಹಾಗೂ ಅನವಶ್ಯಕ ಪ್ರಶ್ನೆಯೊಂದನ್ನು ಕೇಳಿದ ಮಧ್ಯಪ್ರದೇಶದ ಖಾಸಗಿ ಶಾಲೆಗೆ ನೋಟಿಸ್ ನೀಡಲಾಗಿದೆ. ಪ್ರಶ್ನೆ ಪತ್ರಿಕೆಯಲ್ಲಿ ಬಾಲಿವುಡ್ನ ಖ್ಯಾತ ದಂಪತಿಯ ಮಗನ ಹೆಸರು ಕೇಳಲಾಗಿದೆ.
ಖಾಂದ್ವಾ ಜಿಲ್ಲೆಯಲ್ಲಿರುವ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ನಲ್ಲಿ ಇತ್ತೀಚೆಗೆ 6ನೇ ತರಗತಿಗೆ ಪರೀಕ್ಷೆಗಳು ನಡೆದಿವೆ. 'ಪ್ರಚಲಿತ ವಿದ್ಯಮಾನಗಳು' ಪ್ರಶ್ನೆ ಪತ್ರಿಕೆಯಲ್ಲಿ 'ಕರೀನಾ ಕಪೂರ್-ಸೈಫ್ ಅಲಿ ಖಾನ್ ಮಗನ ಪೂರ್ಣ ಹೆಸರೇನು?' ಎಂದು ಕೇಳಲಾಗಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ.
ದೂರಿನ ಮೇರೆಗೆ ರಾಜ್ಯ ಶಿಕ್ಷಣ ಇಲಾಖೆ ಶಾಲಾ ಆಡಳಿತ ಮಂಡಳಿಗೆ ನೋಟಿಸ್ ನೀಡಿದೆ. ಇನ್ನು ಪ್ರಶ್ನೆ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಕರೀನಾ ಕಪೂರ್-ಸೈಫ್ ಅಲಿ ಖಾನ್ ಜೊತೆ ಮಗ ತೈಮೂರ್ ಅಲಿ ಖಾನ್ ಪಟೌಡಿ
ಪರೀಕ್ಷೆಯಲ್ಲಿ ಕೊಹ್ಲಿ ಗರ್ಲ್ಫ್ರೆಂಡ್ ಹೆಸರು ಕೇಳಿದ್ದ ಶಾಲೆ
2016ರಲ್ಲಿ ಮಹಾರಾಷ್ಟ್ರದ ಭಿವಂಡಿಯಲ್ಲಿನ ಹೈಸ್ಕೂಲ್ವೊಂದರ 9ನೇ ತರಗತಿ ಪರೀಕ್ಷೆಯಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯ ಗರ್ಲ್ಫ್ರೆಂಡ್ ಹೆಸರೇನು ಎಂದು ಕೇಳಲಾಗಿತ್ತು. ಇದಕ್ಕೆ ಪ್ರಿಯಾಂಕಾ ಚೋಪ್ರಾ, ಅನುಷ್ಕಾ ಶರ್ಮಾ , ದೀಪಿಕಾ ಪಡುಕೋಣೆ - ಈ ಬಾಲಿವುಡ್ ನಟಿಯರ ಹೆಸರುಗಳನ್ನು ಆಯ್ಕೆಯಾಗಿ ಕೊಡಲಾಗಿತ್ತು.