ಹರಿದ್ವಾರ: ಅಲೋಪತಿ ಕುರಿತು ಬಾಬಾ ರಾಮದೇವ್ ಅವರ ವಿವಾದಾತ್ಮಕ ಹೇಳಿಕೆ ಬಿಸಿ ಇನ್ನೂ ತಣ್ಣಗಾಗುತ್ತಿಲ್ಲ. ಈಗ ಬಿಜೆಪಿ ಮುಖಂಡೆ ಸಾಧ್ವಿ ಪ್ರಾಚಿ ಅವರು ವಿಡಿಯೋ ಬಿಡುಗಡೆ ಮಾಡುವ ಮೂಲಕ ವಿವಾದದ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ವಿರುದ್ಧ ಮಾತನಾಡಿರುವ ಸಾಧ್ವಿ ಪ್ರಾಚಿ ಅವರು ಬಾಬಾ ರಾಮದೇವ್ ಅವರನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.
1928 ರಲ್ಲಿ ಐಎಂಎನಿಂದ ಎನ್ಜಿಒ ರಚನೆಯಾಯಿತು. ಅಲ್ಲಿ ಮದರ್ ತೆರೇಸಾ ರೋಗಿಗಳನ್ನು ಸ್ಪರ್ಶಿಸುವ ಮೂಲಕ ಖಾಯಿಲೆ ಗುಣಪಡಿಸುತ್ತಿದ್ದರು. ಹಾಗೆಯೇ ಸ್ವಾಮಿ ರಾಮದೇವ್ ಅವರು ಭಾರತದಲ್ಲಿ ಕೋಟ್ಯಂತರ ಜನರನ್ನು ಗುಣಪಡಿಸಿದ್ದಾರೆ. ಈ ಹಿನ್ನೆಲೆ ಈ ಐಎಂಎ ಜನರಿಗೆ ಸ್ವಲ್ಪ ನಾಚಿಕೆಯಾಗಬೇಕು ಎಂದು ಹರಿಹಾಯ್ದಿದ್ದಾರೆ.
ಆಯುರ್ವೇದದ ಮೇಲೆ ಕೆಸರು ಎರಚುವ ಬದಲು ಐಎಎಂ ನವರು ಸ್ವಾಮಿ ರಾಮದೇವ್ ಅವರಿಂದ ಶಿಕ್ಷಣ ಪಡೆದುಕೊಳ್ಳಬೇಕು. ಸ್ವಾಮಿ ರಾಮದೇವ್ ರಾಷ್ಟ್ರಕ್ಕಾಗಿ ದೊಡ್ಡ ಕೆಲಸ ಮಾಡುತ್ತಿದ್ದಾರೆ. ಅವರು ಕೋಟ್ಯಂತರ ಭಾರತೀಯರನ್ನು ಗುಣಪಡಿಸುತ್ತಿದ್ದಾರೆ ಎಂದ ಅವರು ದೇಶದಲ್ಲಿ ಧಾರ್ಮಿಕ ಮತಾಂತರದ ಆಟ ನಡೆಯುತ್ತಿದೆ ಎಂದು ಆರೋಪಿಸಿದರು. ಹಾಗೆ ಐಎಂಎ ಹೇಳಿಕೆಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹ ಮಾಡಿದರು.