ಚಂಡೀಗಢ : ತಿಹಾರ್ ಜೈಲಿನಲ್ಲಿ ದೆಹಲಿ ಸಚಿವ ಸತ್ಯೇಂದ್ರ ಜೈನ್ ಗೆ ರಾಜಾತಿಥ್ಯ ದೊರೆಯುತ್ತಿರುವ ವಿಡಿಯೋ ವೈರಲ್ ಆಗಿದ್ದು, ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ವೈರಲ್ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿರೋಮಣಿ ಅಕಾಲಿದಳದ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ, ಇಂದು ದೆಹಲಿಯ ಮಾದರಿಯನ್ನು ಕಣ್ತುಂಬಿಕೊಳ್ಳಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು. ದೊಡ್ಡ ದರೋಡೆಕೋರರು ಮತ್ತು ಸುಕೇಶ್ ಅಂತಹ ವಂಚಕರು ತಿಹಾರ್ಗೆ ಏಕೆ ಹೋಗುತ್ತಾರೆ ಎಂಬುದು ಇಂದು ವೈರಲ್ ಆದ ವಿಡಿಯೋದಿಂದ ತಿಳಿಯಿತು ಎಂದು ವ್ಯಂಗ್ಯವಾಡಿದರು.
ದೆಹಲಿ ಜೈಲುಗಳು ಅಪರಾಧಿಗಳಿಗೆ ಸುರಕ್ಷಿತ ತಾಣವಾಗಿ ಮಾರ್ಪಟ್ಟಿವೆ. ಜೈಲಿನೊಳಗೆ ವಿವಿಐಪಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇಲ್ಲಿಯವರೆಗೆ ಕೇಜ್ರಿವಾಲ್ ಸತ್ಯೇಂದ್ರ ಜೈನ್ ಅವರನ್ನು ತೆಗೆದುಹಾಕದಿರಲು ಕಾರಣವೇನು, ಈ ಪ್ರಕರಣದ ನಂತರವೂ, ಕೇಜ್ರಿವಾಲ್ ಅವರು ತಮ್ಮ ಹುದ್ದೆಯಲ್ಲಿ ಮುಂದುವರಿಸುವುದು ಎಷ್ಟು ಸೂಕ್ತ ಎಂದು ಪ್ರಶ್ನಿಸಿದರು.
ಜೈಲಿನಲ್ಲಿ ವಿಐಪಿ ಸೌಲಭ್ಯ:ಮುಂದುವರಿದು ಮಾತನಾಡಿದ ಅವರು,ಮೂಸೆವಾಲಾ ಹತ್ಯೆಯನ್ನು ತಿಹಾರ್ ಜೈಲಿನಲ್ಲಿಯೇ ಯೋಜಿಸಲಾಗಿತ್ತು ಎಂದು ಆರೋಪಿಸಿದರು. ತಿಹಾರ್ನಲ್ಲಿ ನಕಲಿ ಪಾಸ್‌ಪೋರ್ಟ್ ಮಾಡಲು ಸಂಚು ರೂಪಿಸಲಾಗುತ್ತಿದೆ. ಇದೇ ಮಾದರಿಯನ್ನು ಈಗ ಪಂಜಾಬ್‌ನಲ್ಲಿ ಜಾರಿಗೆ ತರಲಾಗಿದ್ದು, ಲಾರೆನ್ಸ್ ಬಿಷ್ಣೋಯ್‌ಗೆ ಜೈಲಿನಲ್ಲಿ ವಿಐಪಿ ಸೌಲಭ್ಯ ನೀಡಲಾಗುತ್ತಿದೆ ಎಂದು ಮಥಿಜಿಯಾ ಗಂಭೀರ ಆರೋಪ ಮಾಡಿದ್ದಾರೆ.