ವಾಷಿಂಗ್ಟನ್: ಭಾರತೀಯ ಅಮೆರಿಕನ್ ವಕೀಲೆ ರೂಪಾಲಿ ಎಚ್. ದೇಸಾಯಿ ಅವರನ್ನು ಒಂಬತ್ತನೇ ಸರ್ಕ್ಯೂಟ್ನ ಅಮೆರಿಕ ಅಪೀಲುಗಳ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಿಸಲು ಅಮೆರಿಕ ಸಂಸತ್ತು ಅನುಮೋದನೆ ನೀಡಿದೆ. ಈ ಪ್ರಭಾವಶಾಲಿ ಹುದ್ದೆಗೆ ನೇಮಕವಾದ ದಕ್ಷಿಣ ಏಷ್ಯಾದ ಪ್ರಥಮ ವ್ಯಕ್ತಿ ಇವರಾಗಲಿದ್ದಾರೆ.
ಈ ಕುರಿತು ಸಂಸತ್ತಿನಲ್ಲಿ ನಡೆದ ಮತದಾನದಲ್ಲಿ 67-29 ಮತಗಳಿಂದ ರೂಪಾಲಿ ಆಯ್ಕೆಯಾದರು. ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಒಂಬತ್ತನೇ ಸರ್ಕ್ಯೂಟ್, ಅಪೀಲುಗಳ 13 ನ್ಯಾಯಾಲಯಗಳ ಪೈಕಿ ಅತಿ ದೊಡ್ಡದಾಗಿದೆ. ಇದು 9 ರಾಜ್ಯಗಳು ಮತ್ತು 2 ಪ್ರಾಂತ್ಯಗಳ ವ್ಯಾಪ್ತಿಯನ್ನು ಹೊಂದಿದ್ದು, 29 ಸಕ್ರಿಯ ನ್ಯಾಯಾಧೀಶರು ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜಕೀಯ ಮತ್ತು ಸೈದ್ಧಾಂತಿಕ ವಲಯ, ರಾಜ್ಯಗಳ ನ್ಯಾಯಾಧೀಶರು, ಕಾನೂನು ಜಾರಿ ಅಧಿಕಾರಿಗಳು ಮತ್ತು ಮೂರು ವಿಭಿನ್ನ ಅಗ್ನಿಶಾಮಕ ಪ್ರಾಧಿಕಾರ ಅಧಿಕಾರಿಗಳು ರೂಪಾಲಿ ದೇಸಾಯಿ ಅವರ ನೇಮಕವನ್ನು ಶ್ಲಾಘಿಸಿದ್ದಾರೆ. ವಕೀಲೆಯಾಗಿ ಒಟ್ಟಾರೆ 16 ವರ್ಷಗಳ ವೃತ್ತಿ ಅನುಭವ ಹೊಂದಿರುವ ಇವರನ್ನು ಒಂಬತ್ತನೇ ಸರ್ಕ್ಯೂಟ್ಗೆ ನೇಮಕ ಮಾಡಿದ್ದು ಅತ್ಯಂತ ಸೂಕ್ತವಾಗಿದೆ ಎಂದು ಸೆನೇಟ್ ಆಡಳಿತಾರೂಢ ಪಕ್ಷದ ವಿಪ್ ಡಿಕ್ ಡರ್ಬಿನ್ ಬಣ್ಣಿಸಿದ್ದಾರೆ.