ಕೈರೋ (ಈಜಿಪ್ಟ್): ಇಲ್ಲಿ ನಡೆದ ಐಎಸ್ಎಸ್ಎಫ್ (ಇಂಟರ್‌ನ್ಯಾಶನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್) ಶೂಟಿಂಗ್ ವಿಶ್ವಕಪ್ನ ಪುರುಷರ 10 ಮೀಟರ್ ಏರ್ ರೈಫಲ್ ಸ್ಫರ್ಧೆಯಲ್ಲಿ ಭಾರತದ ಹಾಲಿ ವಿಶ್ವ ಚಾಂಪಿಯನ್ ರುದ್ರಾಂಕ್ಷ್ ಪಾಟೀಲ್ ಅವರು ಜರ್ಮನಿಯ ಮ್ಯಾಕ್ಸಿಮಿಲಿಯನ್ ಉಲ್ಬ್ರಿಚ್ ಅವರನ್ನು ಮಣಿಸುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.
ರುದ್ರಾಂಕ್ಷ್ 16-8 ಅಂಕಗಳ ಅಂತರದಿಂದ ಪ್ರತಿಸ್ಪರ್ಧಿಯನ್ನು ಪರಾಭವಗೊಳಿಸಿದರು. ಈ ಮೂಲಕ ಒಟ್ಟು 262 ಅಂಕಗಳನ್ನು ಪಡೆದು ಸ್ಫರ್ಧೆಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡರೆ, ಉಲ್ಬ್ರಿಚ್ 260.6 ಅಂಕಗಳೊಂದಿಗೆ ಸೋಲೊಪ್ಪಿಕೊಂಡರು. ಇದಕ್ಕೂ ಮುನ್ನ ಅರ್ಹತಾ ಸುತ್ತಿನಲ್ಲಿ ರುದ್ರಾಂಕ್ಷ್ 629.3 ಅಂಕಗಳನ್ನು ಪಡೆದು ಏಳನೇ ಸ್ಥಾನದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಇನ್ನುಳಿದಂತೆ ಪುರುಷರ 10 ಮೀಟರ್ ಏರ್ ರೈಫಲ್ ಸ್ಫರ್ಧೆಯಲ್ಲಿ ಭಾರತದ ದಿವ್ಯಾಂಶ್ ಸಿಂಗ್ ಪನ್ವಾರ್ ಮತ್ತು ಹೃದಯ್ ಹಜಾರಿಕಾ ಅರ್ಹತಾ ಸುತ್ತಿನಲ್ಲಿ ಸ್ವಲ್ಪ ಅಂತರದಲ್ಲೇ ಎಡವಿ ಪದಕ ವಂಚಿತರಾದರು.