ನಾಗಪುರ (ಮಹಾರಾಷ್ಟ್ರ): ವಿಜಯದಶಮಿ ಹಿನ್ನಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ದೇಶಾದ್ಯಂತ ಪಥ ಸಂಚಲನ ನಡೆಯಿತು. ಮಹಾರಾಷ್ಟ್ರದ ನಾಗಪುರದಲ್ಲಿ ವಿಜಯ ದಶಮಿ ಹಿನ್ನಲೆ ಪಥ ಸಂಚಲನದಲ್ಲಿ ಸಾವಿರಾರು ಸ್ವಯಂಸೇವಕರು ಭಾಗವಹಿಸಿದ್ದರು. ಜೊತೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ್ ಮೋಹನ್ ಭಾಗವತ್ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಶಂಕರ್ ಮಹಾದೇವನ್ ಪಾಲ್ಗೊಂಡಿದ್ದರು. ಪ್ರತಿವರ್ಷ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ವಿಜಯದಶಮಿಯಂದು ಪಥ ಸಂಚಲನ ನಡೆಸುತ್ತಾರೆ.
ಪಥ ಸಂಚಲನದ ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಾಯಕ ಶಂಕರ್ ಮಹಾದೇವನ್, ಎಲ್ಲರಿಗೂ ವಿಜಯದಶಮಿಯ ಶುಭಾಶಯಗಳು. ನನ್ನನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರೆದಿದ್ದು ತುಂಬಾ ಸಂತೋಷವಾಯಿತು. ಇದು ನನಗೆ ಸಂದ ದೊಡ್ಡ ಗೌರವ. ಈ ಸಂಬಂಧ ನಾನು ಆರ್ಎಸ್ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಮತ್ತು ಸಂಘ ಪರಿವಾರಕ್ಕೆ ಧನ್ಯವಾದವನ್ನು ಅರ್ಪಿಸುತ್ತೇನೆ. ನಾನು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.
ಬಳಿಕ ಮಾತನಾಡಿದ ಆರ್ಎಸ್ಎಸ್ ಸರಸಂಘಚಾಲಕ್ ಮೋಹನ್ ಭಾಗವತ್, ಇಂದಿನ ಕಾರ್ಯಕ್ರಮದ ಮುಖ್ಯ ಅತಿಥಿ ಶಂಕರ್ ಮಹಾದೇವನ್ ಅವರು ಹೇಳಿದ್ದಕ್ಕಿಂತ ಹೆಚ್ಚು ಹೇಳುವ ಅಗತ್ಯ ಇಲ್ಲ. ಭಾರತದ ಕೀರ್ತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಭಾರತವು ಜಿ-20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದೆ. ಇಡೀ ಜಗತ್ತು ನಮ್ಮ ಆತಿಥ್ಯ ಮತ್ತು ಸಂಸ್ಕೃತಿಯನ್ನು ಅನುಭವಿಸಿದೆ. ಭಾರತ ತನ್ನ ನಾಯಕತ್ವದಿಂದ ಇಂದು ವಿಶ್ವದಲ್ಲಿ ಮನ್ನಣೆ ಮತ್ತು ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದರು.