ಮುಂಬೈ (ಮಹಾರಾಷ್ಟ್ರ):ಈರುಳ್ಳಿ ಮೇಲೆ ಶೇ 40 ರಫ್ತು ಸುಂಕ ವಿಧಿಸುವ ಕೇಂದ್ರದ ನಿರ್ಧಾರದ ವಿರುದ್ಧ ರೈತರು ಮತ್ತು ವ್ಯಾಪಾರಿಗಳ ಪ್ರತಿಭಟನೆಗಳ ಮಧ್ಯೆಯೇ, ಮಹಾರಾಷ್ಟ್ರದ ಸಚಿವ ದಾದಾ ಭೂಸೆ ಅವರು ಜನರಿಗೆ ವಿಚಿತ್ರ ಸಲಹೆಯೊಂದನ್ನು ನೀಡಿದ್ದಾರೆ. ''ಜನರು ಪ್ರಮುಖ ಅಡಿಗೆ ಪದಾರ್ಥಗಳಲ್ಲಿ ಬಳಕೆಯಾಗುವ ಈರುಳ್ಳಿಯನ್ನು ಎರಡರಿಂದ ನಾಲ್ಕು ತಿಂಗಳುಗಳವರೆಗೆ ಸೇವಿಸದಿದ್ದರೆ, ಯಾವುದೇ ವ್ಯತ್ಯಾಸವೇನು ಆಗುವುದಿಲ್ಲ'' ಎಂದು ಅವರು ಹೇಳಿದ್ದಾರೆ. ರಾಜ್ಯ ಪಿಡಬ್ಯ್ಲೂಡಿ ಸಚಿವ ಭೂಸೆಯವರು, ''ರಫ್ತು ಸುಂಕವನ್ನು ವಿಧಿಸುವ ನಿರ್ಧಾರವನ್ನು ಸರಿಯಾಗಿ ಚರ್ಚೆಸಿ ತೆಗೆದುಕೊಳ್ಳಬೇಕಿತ್ತು ಎಂದು ಸೋಮವಾರ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಆಗಸ್ಟ್ 19 ರಂದು ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ಸುಂಕವನ್ನು ವಿಧಿಸಿ ಬೆಲೆ ಏರಿಕೆ ತಡೆಯಲು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ಪೂರೈಕೆಯನ್ನು ಸುಧಾರಿಸಿದೆ. ಹಣಕಾಸು ಸಚಿವಾಲಯವು ಅಧಿಸೂಚನೆಯ ಮೂಲಕ ಡಿಸೆಂಬರ್ 31, 2023 ರವರೆಗೆ ಈರುಳ್ಳಿಯ ಮೇಲೆ 40 ಪ್ರತಿಶತ ರಫ್ತು ಸುಂಕವನ್ನು ವಿಧಿಸಿದೆ. "ನೀವು 10 ಲಕ್ಷ ರೂ. ಮೌಲ್ಯದ ವಾಹನವನ್ನು ಬಳಸಿದಾಗ, ನೀವು ಚಿಲ್ಲರೆ ದರಕ್ಕಿಂತ 10 ರೂ. ಅಥವಾ ರೂ 20 ರಷ್ಟು ಹೆಚ್ಚಿನ ದರದಲ್ಲಿ ಉತ್ಪನ್ನಗಳನ್ನು ಖರೀದಿಸಬಹುದು. ಈರುಳ್ಳಿ ಖರೀದಿಸಲು ಸಾಧ್ಯವಾಗದವರು ಎರಡರಿಂದ ನಾಲ್ಕು ತಿಂಗಳ ಕಾಲ ಈರುಳ್ಳಿ ತಿನ್ನದಿದ್ದರೆ, ಯಾವುದೇ ವ್ಯತ್ಯಾಸವೇನಾಗುವುದಿಲ್ಲ'' ಎಂದು ಸಚಿವ ಭೂಸೆ ಹೇಳಿದರು.