ಹೈದರಬಾದ್ :ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತರೂಢ ಕೆ. ಚಂದ್ರಶೇಖರ್ ರಾವ್ ನೇತೃತ್ವದ ಬಿಆರ್‌ಎಸ್ ಪಕ್ಷವನ್ನು ಸೋಲಿಸುವ ಮೂಲಕ ತೆಲಂಗಾಣ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಸಿಎಂ ಆಗುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ದಶಕಗಳ ನಂತರ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಎಬಿವಿಪಿಯಿಂದ ಬೆಳೆದು ಬಂದ ನಾಯಕ: ಇದರೊಂದಿಗೆ ತೆಲಂಗಾಣದ ಕಾಂಗ್ರೆಸ್ ಅಧ್ಯಕ್ಷ ಅನುಮುಲಾ ರೇವಂತ್ ರೆಡ್ಡಿ ಅವರು ಮೊದಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ಯಲ್ಲಿ ಸಕ್ರಿಯರಾಗಿದ್ದರು. ಎಬಿಬಿಪಿಯ ಅಂದಿನ ಖಡಕ್ ಕಾರ್ಯಕರ್ತ ಕಾಂಗ್ರೆಸ್ನ ಹಾಲಿ ಸಂಸದರಾಗಿದ್ದಾರೆ. ತೆಲಂಗಾಣ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಹೊಂದಿರುವ ಇವರು, ಈ ಬಾರಿಯ ಚುನಾವಣೆಯಲ್ಲಿ ಪಕ್ಷ ಸಂಘಟನೆಗೆ ಟೊಂಕ ಕಟ್ಟಿ ನಿಂತವರು. ಇದೀಗ ಸಿಎಂ ಸ್ಥಾನಕ್ಕೆ ಕೇಳಿಬರುತ್ತಿರುವ ಮುಂಚೂಣಿ ಹೆಸರು ರೇವಂತ್ ರೆಡ್ಡಿ ಅವರದ್ದಾಗಿದೆ.
ಕಾಮರೆಡ್ಡಿ ಕ್ಷೇತ್ರದ ಅಭ್ಯರ್ಥಿಯಾಗಿರುವ ರೇವಂತ್ ರೆಡ್ಡಿ ಅವರು ಹಾಲಿ ಸಿಎಂ ಮತ್ತು ಬಿಆರ್‌ಎಸ್ ಅಭ್ಯರ್ಥಿ ಕೆ. ಚಂದ್ರಶೇಖರ ರಾವ್ ಅವರ ವಿರುದ್ಧ ಅಖಾಡಕ್ಕಿಳಿದಿದ್ದಾರೆ. ಇನ್ನು ಹ್ಯಾಟ್ರಿಕ್ ಗೆಲುವಿನ ಕನಸು ಕಂಡಿದ್ದ ಕೆಸಿಆರ್ ಕಾರು ತನ್ನ ಪ್ರಯಾಣ ನಿಲ್ಲಿಸಿದ್ದು, ಇಲ್ಲಿ ಬಿಆರ್ ಎಸ್ ಹಿನ್ನಡೆ ಅನುಭವಿಸಿದೆ.
ಉಸ್ಮಾನಿಯಾ ವಿವಿಯಲ್ಲಿ ಪದವಿ: ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಪದವಿ ಪಡೆದ ರೇವಂತ್ ರೆಡ್ಡಿ ವಿದ್ಯಾರ್ಥಿಯಾಗಿದ್ದಾಗಲೇ ಎಬಿವಿಪಿ ಸದಸ್ಯರಾಗಿದ್ದರು. ಮೊದಲಿನಿಂದಲೂ ರಾಜಕೀಯದಲ್ಲಿ ಸಕ್ರಿಯರಾಗಿದ್ದರಿಂದ 2007 ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ರೇವಂತ್ ರೆಡ್ಡಿ ಎಂಎಲ್ಸಿ ಆಗಿ ಆಯ್ಕೆಯಾದರು. ನಂತರ ತೆಲುಗು ದೇಶಂ ಪಕ್ಷಕ್ಕೆ ಸೇರಿದ ಅವರು 2014 ರಲ್ಲಿ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 46.45 ಶೇಕಡಾ ಮತಗಳೊಂದಿಗೆ ಕೊಡಂಗಲ್ ಕ್ಷೇತ್ರದಿಂದ ಗೆಲುವಿನ ನಗೆ ಬೀರಿದ್ದರು.