ಕರ್ನಾಟಕ

karnataka

ETV Bharat / bharat

ರೆಸ್ಟಾರೆಂಟ್​ ಆನ್​ ವ್ಹೀಲ್​: ಬನಾರಸ್​ನ ರೈಲು ನಿಲ್ದಾಣಗಳಲ್ಲಿ ರೈಲ್​ ಕೋಚ್​ ರೆಸ್ಟಾರೆಂಟ್​ - ಕಾಶಿಯ ಬನಾರಸ್​ ರೈಲು ನಿಲ್ದಾಣ

ಉತ್ತರಪ್ರದೇಶದ ಬನಾರಸ್​ ಹಾಗೂ ವಾರಣಾಸಿಯಲ್ಲಿ ಕಸವೆಂದು ಎಸೆದ ರೈಲು ಕಂಪಾರ್ಟ್‌ಮೆಂಟ್‌ನಲ್ಲಿ ರೆಸ್ಟಾರೆಂಟ್​​ ನಿರ್ಮಿಸಲಾಗಿದ್ದು, ಪ್ರವಾಸಿಗರಿಗೆ ಶೀಘ್ರದಲ್ಲೇ ಲಭ್ಯವಾಗಲಿದೆ.

Rail Coach Restaurant at Banaras Railway Station
ಬನಾರಸ್ ರೈಲು ನಿಲ್ದಾಣದಲ್ಲಿ ರೈಲ್​ ಕೋಚ್​ ರೆಸ್ಟಾರೆಂಟ್​

By

Published : May 15, 2023, 1:39 PM IST

Updated : May 15, 2023, 3:32 PM IST

ಬನಾರಸ್ ರೈಲು ನಿಲ್ದಾಣದಲ್ಲಿ ರೈಲ್​ ಕೋಚ್​ ರೆಸ್ಟಾರೆಂಟ್​

ವಾರಾಣಸಿ: ಕಸದಿಂದ ರಸ ತೆಗೆಯುವ ಕಲ್ಪನೆಗೆ ಹೊಸ ಬಣ್ಣವನ್ನು ಕೊಟ್ಟು ಕಾಶೀ ನಗರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲಾಗುತ್ತಿದೆ. ಅದೇನೆಂದರೆ ಕೆಟ್ಟು ಉಪಯೋಗಕ್ಕೆ ಬಾರದೇ ಜಂಕ್​ಗಳಲ್ಲಿ ಬಿದ್ದಿರುವ ರೈಲು ಬೋಗಿಗಳಿಗೆ ಹೊಸ ರೂಪಗಳನ್ನು ಕೊಟ್ಟು ಅನನ್ಯವಾಗಿ ಬಳಲಾಗಿದೆ. ಈ ಹೊಸ ಕಲ್ಪನೆಯಿಂದ ಅನೇಕ ಜನರಿಗೆ ಉದ್ಯೋಗ ಮಾತ್ರವಲ್ಲದೇ ಪ್ರವಾಸಿಗರನ್ನೂ ಕಾಶೀ ತನ್ನತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ.

ಕಾಶಿಯ ಬನಾರಸ್​ ರೈಲು ನಿಲ್ದಾಣದಲ್ಲಿ ಹಾಳಾಗಿದ್ದ ರೈಲು ಕೋಚ್​ಗಳನ್ನು ರೆಸ್ಟಾರೆಂಟ್​ಗಳಾಗಿ ಮಾರ್ಪಾಟು ಮಾಡಲಾಗಿದೆ. ರೆಸ್ಟಾರೆಂಟ್​ ಆನ್​ ವ್ಹೀಲ್​ ಎನ್ನುವ ಥೀಮ್​ನೊಂದಿಗೆ ಕಾಶೀಯ ಬನಾರಸ್​ ಹಾಗೂ ವಾರಾಣಸಿ ರೈಲು ನಿಲ್ದಾಣಗಳಲ್ಲಿ ರೈಲ್​ ಕೋಚ್​ ರೆಸ್ಟಾರೆಂಟ್​ಗಳು ಪ್ರಾರಂಭವಾಗಲಿದೆ. ಬನಾರಸ್​ನಲ್ಲಿ ಈಗಾಗಲೇ ರೈಲ್​ ಕೋಚ್​​ ರೆಸ್ಟಾರೆಂಟ್​ ನಿರ್ಮಾಣ ಪೂರ್ಣವಾಗಿದ್ದು, ವಾರಾಣಸಿಯಲ್ಲೂ ತಯಾರಾಗುತ್ತಿದೆ. ಈ ಥೀಮ್​ ಬೇಸ್​ಡ್ ರೆಸ್ಟಾರೆಂಟ್​ನಲ್ಲಿ ಬನಾರಸ್​ನ ಸಂಸ್ಕೃತಿ, ಪರಂಪರೆ ಝಲಕ್​ ನೀಡಲಾಗಿದೆ. ಈ ರೆಸ್ಟಾರೆಂಟ್​ಗಳಿಗೆ ಬರುವವರಿಗೆ ತಿನಿಸು, ಊಟ ಸವಿಯುತ್ತಿರುವುದರ ಜೊತೆ ಜೊತೆಗೆ ರೈಲಿನಲ್ಲಿ ಪ್ರಯಾಣಿಸುವುದರ ಭಾವನೆಯೂ ಮೂಡಬೇಕು ಎನ್ನುವ ಉದ್ದೇಶ ರೈಲ್ವೆ ಮಾಲೀಕರದ್ದಾಗಿದೆ.

ಬನಾರಸ್ ರೈಲು ನಿಲ್ದಾಣದಲ್ಲಿ ರೈಲ್​ ಕೋಚ್​ ರೆಸ್ಟಾರೆಂಟ್​

ರೆಸ್ಟಾರೆಂಟ್​ ಆಗಿ ಮಾರ್ಪಾಡಾಗಿರುವ ರೈಲು ಬೋಗಿಯ ಒಳ ಹಾಗೂ ಹೊರಗೆ ವಿವಿಧ ಐತಿಹಾಸಿಕ ಸ್ಥಳಗಳು ಹಾಗೂ ಬಗೆಗೆ ಖಾದ್ಯಗಳ ಚಿತ್ರಗಳನ್ನು ಬರೆಯಲಾಗಿದೆ. ಬಾಯಿ, ಉದರ ತಣಿಸುವುದರ ಜೊತೆಗೆ ಪ್ರವಾಸಿಗರ ಕಣ್ಮನವನ್ನೂ ತನಿಸುವಂತೆ ತಯಾರಾಗಿದೆ ಈ ರೆಸ್ಟಾರೆಂಟ್​ ಆನ್​ ವ್ಹೀಲ್​. ಈ ಟ್ರೈನ್​ ರೆಸ್ಟಾರೆಂಟ್​ನಲ್ಲಿ ಕುಳಿತರೆ ಇಡೀ ಬನಾರಸ್​ ಅನ್ನು ಸುತ್ತು ಹಾಕಿ ಬಂದ ಅನುಭವವಾಗಲಿದೆ. ಪೂರ್ತಿ ಬನಾರಸ್​ ಚಿತ್ರಣವನ್ನು ರೈಲಿನ ಗೋಡೆಗಳಲ್ಲಿ ನೀಡಲಾಗಿದೆ.

ಬನಾರಸ್​ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ನಂಬರ್ ಒಂದರ ಪ್ರವೇಶ ದ್ವಾರದ ಒಂದು ಬದಿಯಲ್ಲಿ ರೈಲ್ ಕೋಚ್ ರೆಸ್ಟೋರೆಂಟ್ ನಿರ್ಮಿಸಲಾಗಿದೆ. ಈ ಕೋಚ್ ಅನ್ನು ಗೋರಖ್‌ಪುರದಿಂದ ತರಲಾಗಿತ್ತು. ಅದರ ಕೆಳಗೆ ರೈಲ್ವೆ ಹಳಿಯನ್ನೂ ಹಾಕಲಾಗಿದೆ. ಹೊರಗಿನಿಂದ ನೋಡಿದಾಗ ಇದು ಸಂಪೂರ್ಣವಾಗಿ ರೈಲ್ವೆ ಕೋಚ್‌ನಂತೆ ಕಾಣುತ್ತದೆ. ಆದರೆ, ಒಳಗೆ ಪ್ರವೇಶಿಸುತ್ತಿದ್ದಂತೆ ಇದು ಐಷಾರಾಮಿ ರೈಲಿನಂತೆ ಭಾಸವಾಗುತ್ತದೆ. ಸುಸಜ್ಜಿತ ಆಸನದ ವ್ಯವಸ್ಥೆ, ಬಣ್ಣ ಬಣ್ಣದ ಲೈಟ್ಸ್​, ಗೋಡೆ ತುಂಬಾ ಕಾಶಿ ಚಿತ್ರಣವಿದೆ. ಕಾಶಿ ದರ್ಶನ ನೀಡುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಅದರ ಜೊತೆಗೆ ವಾರಾಣಸಿಯ ಎಲ್ಲ ಬಗೆಯ ಅಂದರೆ ಸಾಂಪ್ರದಾಯಿಕ ಖಾದ್ಯಗಳನ್ನು ಬಡಿಸುವ ಯೋಜನೆ ಮಾಲೀಕರದ್ದು.

ಬನಾರಸ್ ರೈಲು ನಿಲ್ದಾಣದಲ್ಲಿ ರೈಲ್​ ಕೋಚ್​ ರೆಸ್ಟಾರೆಂಟ್​

ರೈಲ್ವೆ ಪ್ರಯಾಣಿಕರ ಜೊತೆ ಸಾರ್ವಜನಿಕರಿಗೂ ಅವಕಾಶ: ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅಶೋಕ್ ಕುಮಾರ್ ಈಟಿವಿ ಭಾರತ ಜೊತೆ ಮಾತನಾಡಿ, 'ರೆಸ್ಟಾರೆಂಟ್​ ಆನ್​ ವ್ಹೀಲ್​ ಎಂದು ನಾವು ಇದನ್ನು ಕರೆಯುತ್ತೇವೆ. ವಾರಾಣಸಿ ಸಿಟಿ ನಿಲ್ದಾಣದಲ್ಲಿ ಮತ್ತು ವಾರಾಣಸಿ ನಿಲ್ದಾಣದಲ್ಲಿ ಈ ಕೋಚ್ ರೆಸ್ಟಾರೆಂಟ್ ಅನ್ನು ನಿರ್ಮಿಸಲಾಗುತ್ತಿದೆ. ಬನಾರಸ್ ನಿಲ್ದಾಣದಲ್ಲಿ ಇದು ಬಹುತೇಕ ಸಿದ್ಧವಾಗಿದೆ. ಈ ರೈಲ್​ ಕೋಚ್​ ರೆಸ್ಟಾರೆಂಟ್​​​ನಲ್ಲಿ 48 ಜನರು ಒಟ್ಟಿಗೆ ಕುಳಿತುಕೊಳ್ಳಬಹುದು. ಇದರಲ್ಲಿ ಗುಣಮಟ್ಟದ ಆಹಾರವೂ ದೊರೆಯಲಿದೆ. ವಿವಿಧ ರೀತಿಯ ಖಾದ್ಯಗಳು ತಿನ್ನಲು ಲಭ್ಯವಿರುತ್ತವೆ. ಇದರಿಂದ ಪ್ರಯಾಣಿಕರಿಗೆ ಹಾಗೂ ನಗರದ ಜನತೆಗೆ ಅನುಕೂಲವಾಗಲಿದೆ. ರೈಲಿನಲ್ಲಿ ಕೂತು ಊಟ ಮಾಡಿದ ಅನುಭವ ಇರುತ್ತದೆ' ಎಂದು ಹೇಳಿದರು.

ಖಾಸಗಿ ಗುತ್ತಿಗೆದಾರರಿಂದ ಕಾಮಗಾರಿ: ‘ಕೋಚ್ ರೆಸ್ಟಾರೆಂಟ್ ಒಳಗೆ ವಾರಾಣಸಿಯ ಸಂಸ್ಕೃತಿ ಗೋಚರಿಸುತ್ತದೆ. ಇದಕ್ಕಾಗಿ ಅಲಂಕಾರ, ಪೇಂಟಿಂಗ್ ಮಾಡುತ್ತಿದ್ದೇವೆ. ನಾವು ವಾರಾಣಸಿಯಲ್ಲಿದ್ದೇವೆ ಎನ್ನುವ ಅನುಭವ ಜನರಿಗಾಗಬೇಕು. ಚಲಿಸುತ್ತಿರುವ ರೈಲಿನ ಅನುಭವ ನಿಮಗೆ ಸಿಗುವುದಿಲ್ಲ, ಆದರೆ ನಮ್ಮ ಅಲಂಕಾರದಿಂದ ನೀವು ಖಂಡಿತವಾಗಿಯೂ ರೈಲ್ವೇ ಕೋಚ್‌ನಲ್ಲಿ ಕುಳಿತು ಆಹಾರ ಸೇವಿಸಿದ ಅನುಭವವನ್ನು ಪಡೆಯುತ್ತೀರಿ. ಇದನ್ನು ಮಾಡಲು ಖಾಸಗಿ ಗುತ್ತಿಗೆದಾರರಿಗೆ ಕೆಲಸ ವಹಿಸಲಾಗಿದೆ. ಅದರ ವೆಚ್ಚವನ್ನು ಅವರೇ ನಿರ್ವಹಿಸುತ್ತಾರೆ' ಎಂದು ತಿಳಿಸಿದರು.

ರೈಲ್ವೆ ಕಸದಿಂದ ರಸ:ಈ ಬಗ್ಗೆ ರೆಸ್ಟಾರೆಂಟ್​ ಮಾಲೀಕ ವರುಣ್ ಸಿಂಗ್ ಮಾತನಾಡಿ, 'ರೈಲ್ವೆ ಇಲಾಖೆ ಎಸೆದ ಅನುಪಯುಕ್ತ ಬೋಗಿಗಳನ್ನು ಬಳಸಿಕೊಂಡು ಈ ರೈಲ್​ ಕೋಚ್​ ರೆಸ್ಟಾರೆಂಟ್​ ಅನ್ನು ನಿರ್ಮಾಣ ಮಾಡಲಾಗಿದೆ. ರೈಲ್ವೆ ಇಲಾಖೆ ಹೇಳಿದ ವಿಶಿಷ್ಟವಾದ ಥೀಮ್ ಪ್ರಕಾರವೇ ರೆಸ್ಟಾರೆಂಟ್​ ನಿರ್ಮಾಣ ಮಾಡಲಾಗಿದೆ. ನಾವು ರೈಲ್ ಕೋಚ್ ರೆಸ್ಟಾರೆಂಟ್​​ನ ಟೆಂಡರ್ ತೆಗೆದುಕೊಂಡಿದ್ದೇವೆ. ಈ ಥೀಮ್ ಅನ್ನು ಸಾಮಾನ್ಯ ರೆಸ್ಟೋರೆಂಟ್‌ಗಿಂತ ವಿಭಿನ್ನವಾಗಿಸಲು ನಾವು ಬಯಸಿದ್ದೇವೆ. ಯಾರೇ ಬಂದರೂ ಅದರಲ್ಲಿ ದಕ್ಷಿಣ ಭಾರತ, ಚೈನೀಸ್, ವಾರಾಣಾಸಿಯ ಪ್ರಸಿದ್ಧ ಖಾದ್ಯಗಳು ಸಿಗುತ್ತವೆ ಎಂಬುದು ಗೊತ್ತಿರಬೇಕು' ಎಂದು ಹೇಳಿದರು.

ವಾರಾಣಸಿಯ ಪರಂಪರೆ ಪ್ರದರ್ಶಿಸುವ ಪ್ರಯತ್ನ:‘ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದೇವೆ. ಕೋಚ್ ರೆಸ್ಟಾರೆಂಟ್​ ಮುಂದೆ ವಾರಾಣಸಿಯ ಸಂಪೂರ್ಣ ಥೀಮ್ ಅನ್ನು ನೀವು ನೋಡುತ್ತೀರಿ. ವಾರಾಣಸಿಯ ಪ್ರಮುಖ ಸ್ಥಳಗಳು ಗೋಚರಿಸುತ್ತವೆ. ಪ್ರಮುಖ ಉತ್ಸವಗಳನ್ನು ದೃಶ್ಯಾವಳಿಗಳ ಮೂಲಕ ತೋರಿಸಲಾಗುತ್ತದೆ. ಈ ಮೂಲಕ ಕಾಶಿಯ ಬಗ್ಗೆ ತಿಳಿದುಕೊಳ್ಳಲು ಜನರಿಗೆ ಸಾಧ್ಯವಾಗುತ್ತದೆ. ಕಾಶಿಯ ಕಲಾವಿದ, ಕಾದಂಬರಿಕಾರ, ರಂಗ್ ಮಂಚ್ ಕಲಾವಿದರ ಬಗ್ಗೆ ಜನರಿಗೆ ಹೇಳಲಾಗುವುದು. ಮೂರು ನಿಮಿಷಗಳ ವೀಡಿಯೋ ಕೂಡ ಮಾಡಲಾಗುತ್ತಿದ್ದು, ಇದರಲ್ಲಿ ಎಲ್ಲ ಸ್ಥಳಗಳ ಮಾಹಿತಿ ಇರುತ್ತದೆ' ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ದೇಶದ ಮೊದಲ ವಾಟರ್​ ಸ್ಮಾರ್ಟ್​ ಸಿಟಿಯಾಗಲಿರುವ ವಾರಣಾಸಿ

Last Updated : May 15, 2023, 3:32 PM IST

ABOUT THE AUTHOR

...view details