ಮುಲುಗು (ತೆಲಂಗಾಣ):ತೆಲಂಗಾಣ ರಾಜ್ಯದಲ್ಲಿ ನಿರಂತರ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬಿಟ್ಟೂಬಿಡದೆ ಸುರಿಯುತ್ತಿರುವ ವರ್ಷಧಾರೆಯಿಂದ ಹಳ್ಳ-ಕೊಳ್ಳ, ನದಿಗಳು ಉಕ್ಕಿ ಹರಿಯುತ್ತಿವೆ. ಗುರುವಾರ ಮುಲುಗು ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದ ಮಳೆಯಾಗಿದೆ. 64.9 ಸೆಂ.ಮೀ ಮಳೆ ಸುರಿದಿದ್ದು ಇದು ತೆಲಂಗಾಣದ ಹತ್ತು ವರ್ಷಗಳ ಇತಿಹಾಸದಲ್ಲಿ ಅತ್ಯಧಿಕ ಪ್ರಮಾಣದ ಮಳೆಯಾಗಿದೆ. 2013ರ ಜುಲೈ 19ರಂದು ಮುಲುಗು ಜಿಲ್ಲೆಯ ವಜೇಡುವಿನಲ್ಲಿ 51.75 ಸೆಂ.ಮೀ ಮಳೆಯಾಗಿತ್ತು. ಇದೀಗ ಮೂರನೇ ಬಾರಿಗೆ ಮುಳುಗು ಜಿಲ್ಲೆಯಲ್ಲಿ ಗರಿಷ್ಠ ಮಳೆ ಬಿದ್ದಿದೆ.
ಭೂಪಾಲಪಲ್ಲಿ ಜಿಲ್ಲೆಯ ಚಿತ್ಯಾಸ್ನಲ್ಲಿ 61.8 ಸೆಂ.ಮೀ ಮಳೆಯಾಗಿದ್ದು, ಇದು ರಾಜ್ಯದ ಎರಡನೇ ಅತಿ ಹೆಚ್ಚು ಮಳೆಯ ಪ್ರಮಾಣ. ಜಿಲ್ಲೆಯ ಚೇಲ್ಪುರದಲ್ಲಿ 47 ಸೆಂ.ಮೀ., ರಾಯಗೊಂಡದಲ್ಲಿ 46 ಸೆಂ.ಮೀ. ಮಳೆಯಾಗಿದ್ದು, ಇದು ಐದು ಮತ್ತು ಆರನೇಯ ಅತ್ಯಧಿಕ ಪ್ರಮಾಣದ ಮಳೆ ಎಂದು ದಾಖಲಾಗಿದೆ. ಜುಲೈ 23, 2013ರಂದು ಕುಮುರಂ ಭೀಮ್ ಜಿಲ್ಲೆಯ ದಹೆಗಾಂನಲ್ಲಿ 50.36 ಸೆಂ.ಮೀ ಮಳೆ ದಾಖಲಾಗಿತ್ತು. ಇದು ನಾಲ್ಕನೇ ಪ್ರಮಾಣದ ಅತಿ ಹೆಚ್ಚು ಮಳೆಯಾಗಿದೆ.
ಮಂಗಳವಾರ ನಿಜಾಮಾಬಾದ್ ಜಿಲ್ಲೆಯ ವೇಲ್ಪುರದಲ್ಲಿ 43.1 ಸೆಂ.ಮೀ ಮಳೆ ಸುರಿದಿದ್ದು, 2016ರ ಸೆಪ್ಟೆಂಬರ್ 24ರಂದು ನಿಜಾಮಾಬಾದ್ ಜಿಲ್ಲೆಯ ಆರ್ಮೂರಿನಲ್ಲಿ 39.5 ಸೆಂ.ಮೀ ಮಳೆಯಾಗಿತ್ತು. ಗುರುವಾರ ವಾರಂಗಲ್ ಜಿಲ್ಲೆಯ ಮೊಗುಲ್ಲಪಲ್ಲಿಯಲ್ಲಿ 39.4, ಭದ್ರಾದ್ರಿ ಜಿಲ್ಲೆಯ ಕರ್ಕಗುಡೆಂನಲ್ಲಿ 39, ಕರೀಂನಗರ ಜಿಲ್ಲೆಯ ಮಲ್ಲಯ್ಯನಲ್ಲಿ 38.5 ಸೆಂ.ಮೀ ಮಳೆಯಾಗಿದೆ. ಇದು 9 ಮತ್ತು 11ನೇಯ ಅತಿ ಹೆಚ್ಚಿನ ಪ್ರಮಾಣದ ಮಳೆ.