ನಿಮ್ಮ ಮೊಬೈಲ್ಗೆ 'ಎಮರ್ಜೆನ್ಸಿ ಅಲರ್ಟ್: ಸಿವಿಯರ್?' ಎಂಬ ಸಂದೇಶವೊಂದು ಬರುತ್ತಿದೆಯೇ? ಇದು ನಿಮ್ಮನ್ನು ಒಂದು ಕ್ಷಣ ಭಯಬೀಳಿಸಿತೇ? ಈ ಬಗ್ಗೆ ಹೆಚ್ಚು ಚಿಂತಿಸಬೇಕಾದ ಅಗತ್ಯವಿಲ್ಲ. ಏಕೆಂದರೆ ಇದು ತುರ್ತು ಮಾಹಿತಿಯುಳ್ಳ ಸಂದೇಶವಾಗಿದೆ.
"ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ಕಾಸ್ಟಿಂಗ್ ಸಿಸ್ಟಮ್ ಮೂಲಕ ರವಾನೆಯಾದ ಮಾದರಿ ಪರೀಕ್ಷಾ ಸಂದೇಶವಾಗಿದೆ. (ಅಂದರೆ ಸ್ಯಾಂಪಲ್ ಟೆಸ್ಟಿಂಗ್ ಮೆಸೇಜ್). ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ಯಾವುದೇ ಕ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ" ಎಂದು ನಿಮಗೆ ಬಂದಿರುವ 'ಎಮರ್ಜೆನ್ಸಿ ಅಲರ್ಟ್: ಸಿವಿಯರ್?' ಮೆಸೇಜ್ನಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಅಲ್ಲದೇ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (National Disaster Management Authority) ಜಾರಿಗೊಳಿಸುತ್ತಿರುವ ಪ್ಯಾನ್ ಇಂಡಿಯಾ ತುರ್ತು ಎಚ್ಚರಿಕೆ (Pan-India Emergency Alert System) ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಕೂಡಲೇ ಎಚ್ಚರಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕರ ಸುರಕ್ಷತೆಯನ್ನು ಹೆಚ್ಚಿಸುವುದು ಇದರ ಗುರಿ.
ಇದನ್ನೂ ಓದಿ:OTTಗಳು ಟೆಲಿಕಾಂ ಕಂಪನಿಗಳಿಗೆ ಡೇಟಾ ಟ್ರಾಫಿಕ್ ಶುಲ್ಕ ಪಾವತಿಸಲಿ: ಟೆಲಿಕಾಂ ಕಂಪನಿಗಳ ಬೇಡಿಕೆ
ತುರ್ತು ಎಚ್ಚರಿಕೆ ಕಾರ್ಯವಿಧಾನವನ್ನು ಪರೀಕ್ಷಿಸಲು ದೂರಸಂಪರ್ಕ ಇಲಾಖೆ (DoT) ಪ್ರಾರಂಭಿಸಿದ ಪ್ರಾಯೋಗಿಕ (ಟ್ರಯಲ್) ಸಂದೇಶ ಇದಾಗಿದೆ. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಈ ಮೆಸೇಜ್ ಅನ್ನು ಅನೇಕರ ಮೊಬೈಲ್ಗೆ ಕಳುಹಿಸಿ ಸೂಚನೆ ನೀಡಲಾಗಿದೆ. ದೂರಸಂಪರ್ಕ ಇಲಾಖೆಯ ನೀಡಿರುವ ಹೇಳಿಕೆಯ ಪ್ರಕಾರ, ತುರ್ತು ಎಚ್ಚರಿಕೆಗಳನ್ನು ಪ್ರಸಾರ ಮಾಡುವಲ್ಲಿ ಮೊಬೈಲ್ ಬಳಕೆದಾರರು ಮತ್ತು ಸೆಲ್ ಬ್ರಾಡ್ಕಾಸ್ಟ್ ಸಿಸ್ಟಮ್ಗಳ ಪರಿಣಾಮಕಾರಿತ್ವ ಮತ್ತು ದಕ್ಷತೆಯನ್ನು ಅಳೆಯಲು ಇದೇ ರೀತಿಯ ಮೌಲ್ಯಮಾಪನಗಳನ್ನು ವಿವಿಧ ಪ್ರದೇಶಗಳನ್ನು ನಿಯಮಿತವಾಗಿ ನಡೆಸಲಾಗುವುದು ಎನ್ನಲಾಗಿದೆ.
ದೂರಸಂಪರ್ಕ ಇಲಾಖೆ (DoT) ಪ್ರಕಾರ, ಸೆಲ್ ಪ್ರಸಾರ ಎಚ್ಚರಿಕೆ ವ್ಯವಸ್ಥೆ (Cell Broadcast Alert System) ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದ ಎಲ್ಲಾ ಮೊಬೈಲ್ಗೆ ಪ್ರಮುಖ ಮತ್ತು ಸಮಯ- ಸೂಕ್ಷ್ಮ ವಿಪತ್ತು ನಿರ್ವಹಣಾ ಸಂದೇಶಗಳನ್ನು ಕಳುಹಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ತಂತ್ರಜ್ಞಾನವಾಗಿದೆ. ಸಂಭಾವ್ಯ ಬೆದರಿಕೆಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಮತ್ತು ಅವರಿಗೆ ಮಾಹಿತಿ ನೀಡಲು ಸರ್ಕಾರಿ ಏಜೆನ್ಸಿಗಳು ಮತ್ತು ತುರ್ತು ಸೇವೆಗಳು ಇದನ್ನು ಬಳಸಿಕೊಳ್ಳಲಾಗುತ್ತದೆ.
ತುರ್ತು ಮಾಹಿತಿಯುಳ್ಳ ಸಂದೇಶ: ಸುನಾಮಿ, ಪ್ರವಾಹ, ಭೂಕಂಪ ಮತ್ತು ಇಂತಹ ತೀವ್ರ ಘಟನೆಗಳು ಒಳಗೊಂಡಂತೆ ತುರ್ತು ಎಚ್ಚರಿಕೆಗಳನ್ನು ಜನರಿಗೆ ತಲುಪಿಸಲು ಈ ಸೆಲ್ ಬ್ರಾಡ್ಕಾಸ್ಟ್ ಅಲರ್ಟ್ ಸಂದೇಶವನ್ನು ಬಳಸಿಕೊಳ್ಳಲಾಗುತ್ತದೆ.
ಇದನ್ನೂ ಓದಿ:ಒಂದೇ ದಿನದಲ್ಲಿ 7 ಲಕ್ಷ ವಹಿವಾಟು ದಾಖಲಿಸಿದ ಬಿಟ್ ಕಾಯಿನ್; 2 ವರ್ಷಗಳಲ್ಲೇ ಗರಿಷ್ಠ