ಮುಂಬೈ: ಶಿವಸೇನೆ ಬಂಡಾಯ ನಾಯಕ ಏಕನಾಥ್ ಶಿಂಧೆ ಬಂಡಾಯದ ನಡುವೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ಉಳಿಸಿಕೊಳ್ಳುವ ಕಸರತ್ತು ಆರಂಭಿಸಿದ್ದಾರೆ. ಮತ್ತೊಂದೆಡೆ ಬಂಡಾಯ ನಾಯಕ ಶಿಂಧೆ ಪ್ರತ್ಯೇಕ ಗುಂಪು ರಚನೆಗೆ ಸಂಬಂಧಿಸಿದಂತೆ ಪತ್ರವೊಂದನ್ನ ಸಿದ್ಧಪಡಿಸಿದ್ದು, ಇದಕ್ಕೆ ಬಂಡಾಯ ಶಾಸಕರು ಸಹಿ ಹಾಕಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸ್ವತಂತ್ರ ಗುಂಪು ರಚನೆಗೆ 37 ಸದಸ್ಯರ ಅಗತ್ಯವಿದೆ. ಆದರೆ ನಮ್ಮ ಬಳಿ 40 ಶಾಸಕರಿದ್ದಾರೆ ಎಂದು ಏಕನಾಥ್ ಶಿಂಧೆ ಹೇಳಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಶಾಸಕರು ಶಿಂಧೆ ಜೊತೆ ಇರುವ ವಿಡಿಯೋ, ಫೋಟೋಗಳು ಹಾಗೂ ಶಾಸಕರು ಹೇಳಿಕೆಗೆ ಸಹಿ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಿಂಧೆ, ಪ್ರತ್ಯೇಕ ಗುಂಪು ರಚನೆಗೆ ಸಂಬಂಧಿಸಿದ ಪತ್ರವನ್ನು ರಾಜಭವನಕ್ಕೆ ಶೀಘ್ರದಲ್ಲೇ ನೀಡುವ ಸಾಧ್ಯತೆಯಿದೆ.
ಶಿಂಧೆ ತಮ್ಮ ಬೆಂಬಲಿಗ ಶಾಸಕರೊಂದಿಗೆ ನಿನ್ನೆ ಸೂರತ್‌ಗೆ ತೆರಳಿದದ್ದರು. ಆದರೆ ಅವರೆಲ್ಲ ಈಗ ಗುವಾಹಟಿಯಲ್ಲಿದ್ದಾರೆ. ಇನ್ನೊಂದೆಡೆ, ರಾಜ್ಯ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ದೆಹಲಿಗೆ ಭೇಟಿ ನೀಡಿದ್ದಾರೆ. ಈಗಾಗಲೇ ಬಿಜೆಪಿ ಶಾಸಕರಿಗೆ ಮುಂಬೈಗೆ ಬರುವಂತೆ ಆದೇಶ ನೀಡಲಾಗಿದೆ.
ವಿಧಾನಸಭೆ ವಿಸರ್ಜನೆ ಸುಳಿವು ನೀಡಿದ ಸಂಜಯ್ ರಾವುತ್:ಮಹಾರಾಷ್ಟ್ರದಪ್ರಸ್ತುತ ರಾಜಕೀಯ ಬಿಕ್ಕಟ್ಟಿನ ಮಧ್ಯೆ ಅಲ್ಲಿನ ವಿಧಾನಸಭೆಯನ್ನು ವಿಸರ್ಜನೆ ಮಾಡುವ ಬಗ್ಗೆ ಶಿವಸೇನೆಯ ಸಂಜಯ್ ರಾವುತ್ ಸುಳಿವು ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟು ವಿಧಾನಸಭೆ ವಿಸರ್ಜನೆಯತ್ತ ಸಾಗುತ್ತಿದೆ ಎಂದು ಟ್ವೀಟ್ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅತ್ತ ಏಕನಾಥ ಶಿಂದೆ ಅವರ ಬಂಡಾಯ ಯಶಸ್ವಿಯಾಗಲು 37 ಶಿವಸೇನೆ ಶಾಸಕರ ಅಗತ್ಯವಿದೆ. ಸೂರತ್‌ನಿಂದ ಬಂದ ವರದಿಗಳ ಪ್ರಕಾರ, 34 ಶಾಸಕರು ಶಿಂದೆ ಬಳಿ ಇದ್ದಾರೆ. ಈ ಪೈಕಿ 32 ಶಾಸಕರು ಶಿವಸೇನೆಯವರಾಗಿದ್ದಾರೆ. ಬಂಡಾಯ ಯಶಸ್ವಿಯಾಗಬೇಕಾದರೆ ಇನ್ನೂ ಐವರು ಶಾಸಕರು ಬೇಕು. ಆದರೆ ಶಿಂದೆ ಬಣ ತಮ್ಮ ಬಳಿ 40 ಶಾಸಕರಿದ್ದಾರೆ ಎಂದು ಹೇಳಿಕೊಂಡಿದೆ.
ಸೂರತ್‌ನ ಫೋಟೋ ಲೆಕ್ಕಾಚಾರ: ಸೂರತ್‌ನ ಫೋಟೋವನ್ನು ಆಧರಿಸಿ ಹೇಳುವುದಾದರೆ ರಾಜ್ಯ ಸರ್ಕಾರ ಬಿಕ್ಕಟ್ಟಿನಲ್ಲಿರುವುದು ದೃಢವಾಗಿದೆ. ಫೋಟೋ ಪ್ರಕಾರ, ಶಿಂಧೆ ಅವರ ಆಪ್ತ ಶಾಸಕರು ಹೊಸ ಸರ್ಕಾರ ರಚಿಸಲು ಉತ್ಸುಕರಾಗಿದ್ದಾರೆ. ಆದರೆ, ಆ ಫೋಟೋದಲ್ಲಿ ಶಿವಸೇನೆಯ 32 ಶಾಸಕರು ಮಾತ್ರ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಶಾಸಕರು ಪಕ್ಷಾಂತರ ನಿಷೇಧ ಕಾಯ್ದೆಯಿಂದ ಹೊರಬರಬೇಕಾದರೆ ಇನ್ನೂ 5 ಶಿವಸೇನೆ ಶಾಸಕರು ಬೇಕು. ಇನ್ನೊಂದು ಕಡೆ ಶಿಂಧೆ ಬಣದಲ್ಲಿ 40 ಶಾಸಕರಿದ್ದಾರೆ ಎನ್ನಲಾಗಿದೆ.