ಕೋಟಾ(ರಾಜಸ್ಥಾನ):ಸರ್ಕಾರಿ ಆಸ್ಪತ್ರೆಗಳ ಸುವ್ಯವಸ್ಥೆಗೆ ಸರ್ಕಾರ ಏನೇ ಮಾಡಿದರೂ ಅವ್ಯವಸ್ಥೆ ಮಾತ್ರ ತಪ್ಪಿದ್ದಲ್ಲ. ರಾಜಸ್ಥಾನದ ಕೋಟಾ ನಗರದಲ್ಲಿನ ಸರ್ಕಾರಿ ಆಸ್ಪ್ರತ್ರೆಯಲ್ಲಿ ಪಾರ್ಶ್ವವಾಯು ಪೀಡಿತ ಮಹಿಳೆಯ ಕಣ್ಣಿನ ರೆಪ್ಪೆ ಮತ್ತು ಕೂದಲನ್ನು ಇಲಿಯೊಂದು ಕಚ್ಚಿ ತಿಂದಿದೆ. ದುರಂತ ಅಂದರೆ ಆ ಮಹಿಳೆ ಇದ್ದಿದ್ದು ಐಸಿಯುನಲ್ಲಿ. ಇಲಿ ದಾಳಿ ಮಾಡಿದ್ದೂ ಅಲ್ಲೇ.
ಕೋಟಾ ನಗರದಲ್ಲಿರುವ ಮಹಾರಾವ್ ಭೀಮ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೂಪವತಿ(28) ಮೇಲೆ ಮೂಸಿಕ ದಾಳಿ ಮಾಡಿದೆ. ಈ ಆಸ್ಪತ್ರೆಯ ನ್ಯೂರೋ ಸ್ಟ್ರೋಕ್ ವಿಭಾಗದಲ್ಲಿ 46 ದಿನಗಳಿಂದ ಈಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಇಡೀ ದೇಹದ ಯಾವುದೇ ಅಂಗ ಚಲನೆಯಲ್ಲಿಲ್ಲ.
ಮೇ 16 ರಂದು ಮಧ್ಯಾಹ್ನದ ವೇಳೆ ಮಹಿಳೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಐಸಿಯುನೊಳಗೆ ನುಗ್ಗಿರುವ ಇಲಿ ಈಕೆಯ ಕಣ್ಣಿನ ಮೇಲೆ ದಾಳಿ ಮಾಡಿದೆ. ಅಲ್ಲದೇ ರೆಪ್ಪೆಯನ್ನು ಕಚ್ಚಿದ್ದಲ್ಲದೇ, ರೆಪ್ಪೆಯ ಮೇಲಿನ ಕೂದಲನ್ನು ತಿಂದು ಹಾಕಿದೆ. ಇದನ್ನು ಕಂಡ ಆಕೆಯ ಪತ್ನಿ ಆಸ್ಪತ್ರೆಯ ವೈದ್ಯರ ಗಮನಕ್ಕೆ ತಂದಿದ್ದಾರೆ. ಬಳಿಕ ಇದನ್ನು ಯಾರಿಗೂ ತಿಳಿಸದಂತೆ ಕುಟುಂಬಸ್ಥರಿಗೆ ವೈದ್ಯರು ಸೂಚಿಸಿದ್ದಾರೆ.