ಅಯೋಧ್ಯೆ: ಭವ್ಯ ರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ವಿಧಿ-ವಿಧಾನಗಳು ಈಗಾಗಲೇ ಆರಂಭಗೊಂಡಿವೆ. ಗುರುವಾರ ಮುಂಜಾನೆ 'ಜೈ ಶ್ರೀ ರಾಮ್' ಘೋಷಣೆಗಳ ನಡುವೆ ರಾಮಲಲ್ಲಾ ಮೂರ್ತಿಯನ್ನು ಕ್ರೇನ್‌ನಲ್ಲಿ ಎತ್ತುವ ಮೂಲಕ ದೇಗುಲದ ಗರ್ಭಗುಡಿ ತಲುಪಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರು ವೇದ ಸ್ತೋತ್ರ ಪಠಿಸಿದರು. ಇಂದು ಗರ್ಭಗುಡಿಯಲ್ಲಿ ವಿಗ್ರಹವನ್ನಿಡುವ ಸಾಧ್ಯತೆ ಇದೆ ಎಂದು ಶ್ರೀರಾಮ ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ ರಾಮಲಲ್ಲಾ ಮೂರ್ತಿಯನ್ನು ಟ್ರಕ್‌ನಲ್ಲಿ ದೇವಸ್ಥಾನದತ್ತ ತರಲಾಯಿತು. ಜನವರಿ 22ರಂದು ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಸಮಾರಂಭದ ಪೂರ್ವಭಾವಿಯಾಗಿ 7 ದಿನಗಳ ಆಚರಣೆಗಳು ನಡೆಯುತ್ತಿವೆ. 'ಕಲಶ ಪೂಜೆ'ಯೊಂದಿಗೆ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ಸಿಕ್ಕಿದೆ. ವಾರಣಾಸಿಯ ವೇದ ವಿದ್ವಾಂಸರ ನೇತೃತ್ವದಲ್ಲಿ ಈ ಆಚರಣೆಗಳು ನಡೆಯುತ್ತಿವೆ.
ಇಂದು ಆಚರಣೆಗಳ ಮೂರನೇ ದಿನ. ಸಂಜೆ ತೀರ್ಥೋದ್ಭವ, ಜಲಯಾನ, ಜಲಧಿವಾಸ, ಗಂಧಾಧಿವಾಸ ಕಾರ್ಯಕ್ರಮ ನಡೆಯಲಿದೆ. ರಾಮಲಲ್ಲಾ ಮೂರ್ತಿಗೆ ನೀರಿನಿಂದ ಸ್ನಾನ ಮಾಡಿಸಿದ ಬಳಿಕ ದೇಹಕ್ಕೆ ಪರಿಮಳಯುಕ್ತ ದ್ರವ ಅನ್ವಯಿಸಲಾಗುತ್ತದೆ. ತದನಂತರ ಶುಭ ಮುಹೂರ್ತದಲ್ಲಿ ಮೂರ್ತಿಯನ್ನು ದೇವಾಲಯದ ಗರ್ಭಗುಡಿಯಲ್ಲಿ ಕೂರಿಸಲಾಗುವುದು.
ಇದಕ್ಕೂ ಮುನ್ನ ಮಂಗಳವಾರ ಪ್ರಾಯಶ್ಚಿತ್ತ ಹಾಗೂ ಕರ್ಮಕುಟಿ ಪೂಜೆ ನೆರವೇರಿತು. ರಾಮ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ಇತರ ಅನೇಕ ಆಚರಣೆಗಳು ನಡೆಯುತ್ತಿವೆ. ಬುಧವಾರ, ರಾಮಲಾಲಾ ವಿಗ್ರಹವನ್ನು ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಮೂರ್ತಿ ದೇವಾಲಯ ಪ್ರವೇಶಿಸಿತು. ನಾಳೆ (ಜನವರಿ 19) ಔಷಧಿವಾಸ, ಕೇಸರಧಿವಾಸ, ಘೃತಾಧಿವಾಸ, ಧಾನ್ಯಾಧಿವಾಸ ಕಾರ್ಯಗಳು ನಡೆಯಲಿವೆ.
ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಅಂದಾಜು 15ರಿಂದ 200 ಕೆ.ಜಿ ತೂಕದ ರಾಮಲಲ್ಲಾ ಮೂರ್ತಿಯು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗಲಿದೆ. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ರಾಮ ಲಲ್ಲಾನ ವಿಗ್ರಹವು ಕಮಲದ ದಳಗಳನ್ನು ಹೋಲುವ ಕಂಗಳು ಹಾಗೂ ಮುಖವು ಚಂದಿರನಂತೆ ಹೊಳೆಯುತ್ತದೆ ಎಂದು ಬಣ್ಣಿಸಿದ್ದಾರೆ. ತುಟಿಯಂಚಿನಲ್ಲಿ ಪ್ರಶಾಂತವಾದ ನಗು ತುಂಬಿರುವ, ಉದ್ದನೆಯ ತೋಳುಗಳು ಮೊಣಕಾಲುಗಳವರೆಗೆ ಚಾಚಿಕೊಂಡಿವೆ. ರಾಮ ಲಲ್ಲಾ ಒಂದು ಅಂತರ್ಗತ ದೈವಿಕ ಪ್ರಶಾಂತತೆ ಮತ್ತು ಅದ್ಭುತ ನೋಟ ಹೊಂದಿದೆ ಎಂದಿದ್ದಾರೆ.
ರಾಮಮಂದಿರ ಟ್ರಸ್ಟ್ ಅಧಿಕಾರಿಗಳ ಪ್ರಕಾರ, ಆಚರಣೆಗಳು ಜನವರಿ 21ರವರೆಗೆ ನಡೆಯಲಿವೆ. ಪವಿತ್ರೀಕರಣದ ದಿನದಂದು, ರಾಮ ಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆಗೆ ಪೂರಕ ಆಚರಣೆಗಳನ್ನು 121 ಆಚಾರ್ಯರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ರಾಮ ಮಂದಿರ 'ಪ್ರಾಣ ಪ್ರತಿಷ್ಠಾಪನಾ' ಕಾರ್ಯವು ಜನವರಿ 22ರಂದು ಮಧ್ಯಾಹ್ನ 12:20ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಅಯೋಧ್ಯೆಯಲ್ಲಿ ಕಾರ್ಯಕ್ರಮಕ್ಕೆ ಭರದ ಸಿದ್ಧತೆಗಳು ನಡೆಯುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮುಖ್ಯ ಅತಿಥಿಯಾಗಿ ದೇಶದಾದ್ಯಂತದ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು, ಸಂತರು ಮತ್ತು ಗಣ್ಯರು ಸೇರಿದಂತೆ 7,000ಕ್ಕೂ ಹೆಚ್ಚು ಜನರು ಅದ್ಧೂರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ವಿವಿಧ ದೇಶಗಳ 100 ಪ್ರತಿನಿಧಿಗಳು ಸಹ ಪವಿತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ:ಬಿಗಿ ಭದ್ರತೆ ನಡುವೆ ರಾಮಜನ್ಮಭೂಮಿ ಸಂಕೀರ್ಣಕ್ಕೆ ರಾಮಲಲ್ಲಾ ಪ್ರತಿಮೆ ರವಾನೆ