ಬಾರ್ಮರ್(ರಾಜಸ್ಥಾನ):ಜಮೀನು ವಿವಾದದಲ್ಲಿ ಮಹಿಳೆಯೋರ್ವಳ ಮೇಲೆ ಜೆಸಿಬಿಯಿಂದ (JCB machine) ದರ್ಪ ತೋರಿಸಿರುವ ಘಟನೆ ರಾಜಸ್ಥಾನದ ಬಾರ್ಮರ್ನಲ್ಲಿ ನಡೆದಿದೆ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ಮಧ್ಯೆ ಗಲಾಟೆ ಏರ್ಪಟ್ಟಿತ್ತು ಎಂದು ತಿಳಿದುಬಂದಿದೆ.
ವಿಡಿಯೋದಲ್ಲಿ ಮಹಿಳೆಯೋರ್ವಳ ಮೇಲೆ ಜೆಸಿಬಿಯಿಂದ ದಾಳಿ ಮಾಡಲು ಯತ್ನಿಸಲಾಗಿದೆ. ಈ ವೇಳೆ ಮತ್ತಿಬ್ಬರು ಮಹಿಳೆಯರು ಸಹ ಹಲ್ಲೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲೇ ಅನೇಕರು ಉಪಸ್ಥಿತರಿರುವುದು ಕಂಡು ಬಂದಿದೆ.
ಬಾರ್ಮರ್ ಜಿಲ್ಲೆಯ ಬೈಟು ಪಟ್ಟಣದ ವಿಡಿಯೋ ಇದಾಗಿದೆ ಎನ್ನಲಾಗುತ್ತಿದ್ದು, ಜಮೀನು ವಿವಾದವೇ ಜಗಳ ನಡೆಯಲು ಮುಖ್ಯ ಕಾರಣ ಎಂದು ತಿಳಿದುಬಂದಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ದೀಪಕ್ ಬಾರ್ಗವ್, ಜಮೀನು ವಿವಾದವೇ ಈ ಘಟನೆಗೆ ಕಾರಣ. ಭೂ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಕಳೆದ ಅನೇಕ ವರ್ಷಗಳಿಂದ ಜಗಳ ನಡೆಯುತ್ತಿತ್ತು ಎಂದು ಹೇಳಿದ್ದಾರೆ.