ನವದೆಹಲಿ: ಜುಲೈ 1, 2023 ರಿಂದ ಜಾರಿಗೆ ಬರುವಂತೆ ರೈಲ್ವೆ ಮಂಡಳಿ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆಯನ್ನು ಶೇಕಡಾ 42 ರಿಂದ ಶೇಕಡಾ 46 ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದೆ. ಸರ್ಕಾರಿ ನೌಕರರಿಗೆ ಶೇ.4ರಷ್ಟು ಡಿಎ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದ ಐದು ದಿನಗಳ ಬಳಿಕ ಡಿಎ ಹೆಚ್ಚಳ ಘೋಷಣೆಯಾಗಿದೆ.
ಅಕ್ಟೋಬರ್ 23, 2023 ರಂದು ರೈಲ್ವೆ ಮಂಡಳಿಯ ಜನರಲ್ ಮ್ಯಾನೇಜರ್‌ಗಳು ಮತ್ತು ಅಖಿಲ ಭಾರತ ರೈಲ್ವೆ ಮತ್ತು ಉತ್ಪಾದನಾ ಘಟಕಗಳ ಮುಖ್ಯ ಆಡಳಿತಾಧಿಕಾರಿಗಳೊಂದಿಗೆ ಲಿಖಿತ ಸಂವಹನ ಮಾಡಲಾಗಿದೆ. ಇತ್ತೀಚಿನ ಹೆಚ್ಚಳದ ನಂತರ, ನೌಕರರು ತಮ್ಮ ಮುಂಬರುವ ವೇತನದಲ್ಲಿ ಜುಲೈನಿಂದ ಬಾಕಿ ಇರುವ ಹೆಚ್ಚಿದ ಡಿಎಯನ್ನು ಪಡೆಯಲಿದ್ದಾರೆ ಎಂದು ರೈಲ್ವೆ ಮಂಡಳಿ ತಿಳಿಸಿದೆ.
ರೈಲ್ವೆ ಬೋರ್ಡ್ ಹೊರಡಿಸಿದ ಸುತ್ತೋಲೆಯಲ್ಲಿ 'ರೈಲ್ವೆ ನೌಕರರಿಗೆ ಪಾವತಿಸಬೇಕಾದ ತುಟ್ಟಿಭತ್ಯೆಯನ್ನು 2023 ರ ಜುಲೈ 1 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇ 42ರ ರಿಂದ ಶೇ 46ರಕ್ಕೆ ಹೆಚ್ಚಿಸಲಾಗುವುದು' ಎಂದು ಹೇಳಿದೆ. ದೀಪಾವಳಿ ಹಬ್ಬದ ಮುನ್ನವೇ ಡಿಎ ಹೆಚ್ಚಳವನ್ನು ರೈಲ್ವೆ ಒಕ್ಕೂಟಗಳು ಸ್ವಾಗತಿಸಿವೆ. ಸರ್ಕಾರವು ಅಂಗೀಕರಿಸಿದ 7 ನೇ CPC (ಕೇಂದ್ರ ವೇತನ ಆಯೋಗ) ಶಿಫಾರಸಿನ ಪ್ರಕಾರ ಪಡೆದ ವೇತನವನ್ನು ಮೂಲ ವೇತನ ಎಂದು ಸುತ್ತೋಲೆಯಲ್ಲಿ ವಿವರಿಸಲಾಗಿದೆ.
ಹಣದುಬ್ಬರ ಮತ್ತು ಬೆಲೆ ಏರಿಕೆಯಿಂದ ನೌಕರರನ್ನು ರಕ್ಷಿಸುವ ಉದ್ದೇಶದಿಂದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆಧರಿಸಿ ಡಿಎ ಹೆಚ್ಚಿಸಲಾಗುತ್ತಿದೆ ಎಂದು ರೈಲ್ವೆ ನೌಕರರ ಸಂಘದ ಮುಖಂಡರು ಹೇಳಿದ್ದಾರೆ.
ಇದನ್ನು ಓದಿ:ತುಟ್ಟಿಭತ್ಯೆ ಹೆಚ್ಚಳ.. ನೌಕರರಿಗೆ ದೀಪಾವಳಿ ಗಿಫ್ಟ್ ನೀಡಿದ ಮೋದಿ ಸರ್ಕಾರ
ಕೇಂದ್ರದ ಸರ್ಕಾರಿ ನೌಕರರ ತುಟ್ಟಿ ಭತ್ಯೆಯನ್ನು ಸರ್ಕಾರ ಕಳೆದ ಬುಧವಾರ ಶೇ.4ರಷ್ಟು ಏರಿಕೆ ಮಾಡಿ ಘೋಷಣೆ ಮಾಡಿತ್ತು. ಇದು ಜುಲೈ 1ರಿಂದಲೇ ಪೂರ್ವಾನ್ವಯವಾಗಲಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದರು. ಇದು ಲಕ್ಷಾಂತರ ಹಾಲಿ ನೌಕರರು ಹಾಗೂ ಪಿಂಚಿಣಿದಾರರಿಗೆ ಅನುಕೂಲವಾಗಿದೆ.
ಅಕ್ಟೋಬರ್ 18 ರಂದು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ನಡೆಯಿತು. ಸಂಪುಟ ಸಭೆ ಬಳಿಕ ಮಾತನಾಡಿದ ಅವರು, ಈಗ ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಳವಾಗಿದೆ, ಒಟ್ಟಾರೆ ಇದರ ಪ್ರಮಾಣ ಶೇ 46ರಷ್ಟಾಗಿದೆ. ಇದು ಜುಲೈ 1ರಿಂದ ಅನ್ವಯವಾಗಲಿದೆ. 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿ ಇದನ್ನು ಹೆಚ್ಚಳ ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ಇದರ ಅನುಕೂಲವನ್ನು 48.67 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 67.95 ಲಕ್ಷ ಪಿಂಚಣಿದಾರರು ಪಡೆಯಲಿದ್ದಾರೆ.