ನವದೆಹಲಿ: ತಮಿಳುನಾಡಿನ ಕನ್ಯಾಕುಮಾರಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯು ಜಮ್ಮು ಮತ್ತು ಕಾಶ್ಮೀರವನ್ನು ಗುರುವಾರ ಸಂಜೆ ಪ್ರವೇಶಿಸಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ಬಿಗಿ ಭದ್ರತೆಯ ನಡುವೆ ಅಂತಿಮ ಹಂತದಲ್ಲಿ ರಾಹುಲ್ ಪಾದಯಾತ್ರೆ ನಡೆಯಲಿದ್ದು, ಜನವರಿ 30ರಂದು ಯಾತ್ರೆಯ ಸಮಾರೋಪ ಕಾರ್ಯಕ್ರಮ ಜರುಗಲಿದೆ.
2022ರ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುಮಾರು 3,500 ಕಿಮೀಗಳ ಸುದೀರ್ಘವಾದ ತಮ್ಮ ಯಾತ್ರೆಯನ್ನು ರಾಹುಲ್ ಗಾಂಧಿ ಕೈಗೊಂಡಿದ್ದಾರೆ. ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಹಾಗೂ ಪಂಜಾಬ್ನಲ್ಲಿ ಪಾದಯಾತ್ರೆ ಪೂರ್ಣಗೊಂಡಿದೆ. ಇಂದು ಸಂಜೆ ಪಂಜಾಬ್ ಮೂಲಕ ಕಥುವಾ ಜಿಲ್ಲೆಯ ಲಖನ್‌ಪುರದ ಗಡಿ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಪ್ರವೇಶಿಸಿತು. ರಾಹುಲ್ ಗಾಂಧಿ ಅವರನ್ನು ಹಿರಿಯ ಕಾಂಗ್ರೆಸ್ ನಾಯಕರು ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ, ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಬರಮಾಡಿಕೊಂಡರು.
ಈ ವೇಳೆ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ನನ್ನ ಕುಟುಂಬದ ಮೂಲವು ಜಮ್ಮು ಮತ್ತು ಕಾಶ್ಮೀರವಾಗಿದೆ. ಇಂದು ನಾನು ಮನೆಗೆ ಬಂದಿದ್ದೇನೆ ಎಂದು ಹೇಳಿದರು. ಅಲ್ಲದೇ, ಜಮ್ಮು ಮತ್ತು ಕಾಶ್ಮೀರದ ಜನರು ಅನುಭವಿಸುತ್ತಿರುವ ನೋವು ನನಗೆ ಅರ್ಥವಾಗಿದೆ. ನಿಮ್ಮ ದುಃಖವನ್ನು ಹಂಚಿಕೊಳ್ಳಲು ಬಂದಿದ್ದೇನೆ. ನಮ್ಮ ಭಾರತ್ ಜೋಡೋ ಯಾತ್ರೆ ಪ್ರೀತಿ ಮತ್ತು ಸಹಾನುಭೂತಿಯನ್ನು ಹರಡುವ ಗುರಿಯನ್ನು ಹೊಂದಿದೆ ಎಂದು ರಾಹುಲ್ ತಿಳಿಸಿದರು.
ಇಂದು ರಾತ್ರಿ ಕಥುವಾದ ಹತ್ಲಿ ಮೋರ್ಹ್ ಪ್ರದೇಶದಲ್ಲಿ ಯಾತ್ರೆಯು ವಾಸ್ತವ್ಯ ಹೂಡಲಿದೆ. ಜನವರಿ 20ರಂದು ಬೆಳಗ್ಗೆ ಮತ್ತೆ ಯಾತ್ರೆ ಆರಂಭವಾಗಲಿದ್ದು, ಜನವರಿ 21ರಂದು ಯಾತ್ರೆಗೆ ವಿರಾಮ ಇರಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 350 ಕಿಮೀ ದೂರವನ್ನು ಭಾರತ್ ಜೋಡೋ ಯಾತ್ರೆ ಸಂಚರಿಸಲಿದೆ. ಜನವರಿ 30ರಂದು ಶ್ರೀನಗರದ ಶೇರ್ ಎ ಕಾಶ್ಮೀರ ಕ್ರಿಕೆಟ್ ಸ್ಟೇಡಿಯಂನಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಯಾತ್ರೆ ಮುಕ್ತಾಯಗೊಳ್ಳಲಿದೆ.
ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ವಾಗ್ದಾಳಿ: ಇದಕ್ಕೂ ಮುನ್ನ ಪಂಜಾಬ್ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರ್ಎಸ್ಎಸ್ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದರು. ದೇಶದಲ್ಲಿ ಭಯ, ದ್ವೇಷ ಮತ್ತು ಹಿಂಸಾಚಾರ ಹಾಗೂ ಭಯದ ವಾತಾವಣ ಸೃಷ್ಟಿಸಲಾಗುತ್ತಿದೆ. ಬಿಜೆಪಿಯು ಧರ್ಮ, ಜಾತಿ ಮತ್ತು ಭಾಷೆಯ ಹೆಸರಿನಲ್ಲಿ ಜನರನ್ನು ವಿಭಜಿಸುತ್ತಿದೆ ಮತ್ತು ಜನರ ನಡುವೆ ಬಿರುಕು ಮೂಡಿಸುತ್ತಿದೆ ಎಂದು ಟೀಕಿಸಿದರು.
ಇದೇ ವೇಳೆ, ಬಿಜೆಪಿ ಸರ್ಕಾರವು ನಿಷ್ಪಕ್ಷಪಾತ ನೀತಿಗಳನ್ನು ರೂಪಿಸುತ್ತಿದೆ ಎಂದು ದೂರಿದ ಅವರು, ರೈತರು ಹಗಲಿರುಳು ಶ್ರಮಿಸುವ ಮೂಲಕ ದೇಶವನ್ನು ಪೋಷಿಸುತ್ತಿದ್ದಾರೆ. ಇದಕ್ಕೆ ರೈತರು ಪ್ರತಿಯಾಗಿ ಏನನ್ನೂ ಬಯಸುವುದಿಲ್ಲ. ಅವರಿಗೆ ಗೌರವ ಸಿಗಬೇಕಾಗಿದೆ. ಆದರೆ, ಈ ಹಿಂದೆ ಮೂರು ಕೃಷಿ ಕಾಯ್ದೆಗಳ ಮೂಲಕ ರೈತರ ಮನಸ್ಸಿನಲ್ಲಿ ಭಯದ ಸ್ಥಿತಿಯನ್ನು ಸೃಷ್ಟಿಸುವ ಕೆಲಸ ಮಾಡಿತ್ತು. ರೈತರು ಬೆಳೆ ಹಾನಿ ಪರಿಹಾರದಿಂದಲೂ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ:ಭಾರತ್ ಜೋಡೋ ಯಾತ್ರೆ ಸಾಮಾಜಿಕ ಆಂದೋಲನ.. ಹಾಥ್ ಸೇ ಹಾಥ್ ಜೋಡೋ ರಾಜಕೀಯ ಅಭಿಯಾನ: ಕಾಂಗ್ರೆಸ್