ತಿರುವನಂತಪುರಂ (ಕೇರಳ): ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಮೂರು ದಿನಗಳ ಕೇರಳ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ಹಾಗೂ ವಯನಾಡು ಸಂಸದ ರಾಹುಲ್ ಗಾಂಧಿ ಇಂದು ಮಧ್ಯಾಹ್ನ ತಿರುವನಂತಪುರಂಗೆ ಭೇಟಿ ನೀಡಲಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಪಕ್ಷದಲ್ಲಿನ ವಿಧಾನಸಭೆ ಸ್ಥಾನ ಹಂಚಿಕೆ ಕುರಿತು ತಾತ್ಕಾಲಿಕ ನಿರ್ಧಾರಗಳನ್ನು ಶೀಘ್ರದಲ್ಲೇ ತೆಗೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್ ಮುಖಂಡರು ಮತ್ತು ಮಿತ್ರ ಪಕ್ಷದ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಿ, ಬಳಿಕ ಜಂಟಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಇದನ್ನೂ ಓದಿ: ಕೋಯಿಕ್ಕೋಡ್ ವಿಮಾನ ಅಪಘಾತದಲ್ಲಿ ಬದುಕುಳಿದವರ ಭೇಟಿ ಮಾಡಿದ ರಾಹುಲ್
ಎನ್ಸಿಪಿ ಉಚ್ಛಾಟಿತ ಸಂಸದ ಮಣಿ ಸಿ ಕಪ್ಪನ್ ಹೊಸದಾಗಿ ಸ್ಥಾಪಿಸಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಕೇರಳ (ಎನ್‌ಸಿಕೆ) ಪಕ್ಷವನ್ನು ಯುಡಿಎಫ್ಗೆ ಸೇರಲು ಅವಕಾಶ ನೀಡುವ ಬಗ್ಗೆ ಕೂಡ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಜೊತೆ ರಾಗಾ ಚರ್ಚಿಸಲಿದ್ದಾರೆ.
ಫೆಬ್ರವರಿ 1 ರಂದು ಕಾಸರಗೋಡದಲ್ಲಿ ಪ್ರಾರಂಭವಾದ 'ಐಶ್ವರ್ಯಾ ಕೇರಳ ಯಾತ್ರೆ' ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ತಿರುವನಂತಪುರಂ ತಲುಪಿದೆ. ತಿರುವನಂತಪುರಂನಲ್ಲಿ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ರಾಹುಲ್ ಭಾಗವಹಿಸಲಿದ್ದಾರೆ.