ತಿರುನೆಲ್ವೇಲಿ (ತಮಿಳುನಾಡು):ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತಮಿಳುನಾಡು ಜನರನ್ನ ನಿಯಂತ್ರಿಸಬಹುದೆಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಾವಿಸಿದೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ ಎರಡನೇ ಹಂತದ ಪ್ರಚಾರ ಆರಂಭಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಿನ್ನೆ ತಿರುನೆಲ್ವೇಲಿಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದರು.
ತಮಿಳುನಾಡನ್ನ ಮೋದಿ ತಮ್ಮ ಟಿವಿ ಎಂದು ಭಾವಿಸಿದ್ದು, ರಿಮೋಟ್ ಹಿಡಿದುಕೊಂಡು ತಮಗೆ ಬೇಕಾದುದನ್ನು ಮಾಡಬಹುದೆಂದು ಅಂದುಕೊಂಡಿದ್ದಾರೆ. ಮೋದಿ ಟಿವಿ ವಾಲ್ಯೂಮ್ ಜಾಸ್ತಿ ಮಾಡಿದ್ರೆ, ಸಿಎಂ ಜೋರಾಗಿ ಮಾತಾಡ್ತಾರೆ, ಕಡಿಮೆ ಮಾಡಿದ್ರೆ ಮೆಲ್ಲಗೆ ಮಾತಾಡ್ತಾರೆ. ಆದರೆ ಜನರು ರಿಮೋಟ್‌ನಿಂದ ಬ್ಯಾಟರಿಯನ್ನು ತೆಗೆದುಹಾಕಿ ಅದನ್ನು ಎಸೆಯಲು ಹೊರಟಿದ್ದಾರೆ ಎಂದು ರಾಗಾ ವ್ಯಂಗ್ಯವಾಡಿದರು.
ಸಿಎಂ ಪಳನಿಸ್ವಾಮಿ ಒಬ್ಬ ಭ್ರಷ್ಟ ನಾಯಕ
ಮುಖ್ಯಮಂತ್ರಿ ಎಡಪ್ಪಾಡಿ ಕೆ ಪಳನಿಸ್ವಾಮಿ ಒಬ್ಬ ಭ್ರಷ್ಟ ನಾಯಕ. ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೆದರುವುದಿಲ್ಲ, ಹೀಗಾಗಿ ರಾತ್ರಿ ಮಲಗಿದ 30 ಸೆಕೆಂಡುಗಳಲ್ಲೇ ನಿದ್ರೆಗೆ ಜಾರುತ್ತೇನೆ. ತಮಿಳುನಾಡು ಸಿಎಂ ನಿದ್ರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತಾನೆ? ಅವರು ಪ್ರಾಮಾಣಿಕರಲ್ಲದ ಕಾರಣ ರಾತ್ರಿ ಮಲಗಲು ಸಾಧ್ಯವಿಲ್ಲ. ಅವರು ಭ್ರಷ್ಟರಾಗಿದ್ದರಿಂದ ತಮಿಳುನಾಡಿನ ಜನರನ್ನು ನಿಯಂತ್ರಿಸಬಹುದೆಂದು ಭಾವಿಸುವ ಮೋದಿಯವರ ವಿರುದ್ಧ ಎದ್ದು ನಿಲ್ಲಲು ಅವರಿಂದ ಸಾಧ್ಯವಿಲ್ಲ ಎಂದು ಆರೋಪಿಸಿದರು.
ಏಪ್ರಿಲ್ 6 ರಂದು ತಮಿಳುನಾಡು ವಿಧಾನಸಭಾ ಚುನಾವಣೆ ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 2 ರಂದು ಮತ ಎಣಿಕೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ ನಿನ್ನೆ ಘೋಷಿಸಿದೆ. 234 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ಕಾಂಗ್ರೆಸ್-ಡಿಎಂಕೆ ಮತ್ತು ಬಿಜೆಪಿ-ಎಐಎಡಿಎಂಕೆ ಮೈತ್ರಿಯು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಲಿವೆ.