ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದಿನಿಂದ 2 ದಿನಗಳ ಕಾಲ ಲಡಾಖ್ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಇಂದು ಮತ್ತು ನಾಳೆ ಲಡಾಖ್ಗೆ ತೆರಳಲಿದ್ದಾರೆ ಎಂಬುದನ್ನು ತಿಳಿಸಿರುವ ಪಕ್ಷದ ಮೂಲಗಳು ಬೇರೆ ಯಾವುದೇ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿಲ್ಲ.
ರಾಹುಲ್ ಗಾಂಧಿ ಈ ಹಿಂದೆ ಅಂದರೆ ಈ ವರ್ಷದ ಪ್ರಾರಂಭದ ಜನವರಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರಕ್ಕೆ ಭೇಟಿ ನೀಡಿದ್ದರು. ಹಾಗೆ ತಮ್ಮ ವೈಯಕ್ತಿಕ ಭೇಟಿಗಾಗಿ ಮತ್ತೊಮ್ಮೆ ಫೆಬ್ರವರಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿದ್ದರು. ಆದರೆ ಲಡಾಖ್ಗೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ.
ಇನ್ನು ಮುಂದಿನ ತಿಂಗಳು ಸೆಪ್ಟೆಂಬರ್ನ 2ನೇ ವಾರದಲ್ಲಿ ಯುರೋಪ್ ಪ್ರವಾಸ ಕೈಗೊಳ್ಳಲಿದ್ದಾರೆ. ಅಲ್ಲಿ ಯುರೋಪ್ ಸಂಸದರು, ಭಾರತೀಯ ವಲಸೆಗಾರರು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಭೇಟಿಯಾಗಲಿದ್ದಾರೆ. ಜತೆಗೆ ಬೆಲ್ಜಿಯಂ, ನಾರ್ವೆ ಮತ್ತು ಫ್ರಾನ್ಸ್‌ಗೆ ಕೂಡ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕಳೆದ ಮೇ ತಿಂಗಳಿನಲ್ಲಿ ರಾಹುಲ್ ಗಾಂಧಿ ಅಮೆರಿಕ ಪ್ರವಾಸ ಮುಗಿಸಿ ಬಂದಿದ್ದರು. ಅದಾದ ಬಳಿಕ ಇದೀಗ ಯುರೋಪ್ ಪ್ರವಾಸ ಕೈಗೊಳ್ಳಲಿದ್ದಾರೆ.
ಅಮೆರಿಕ ಪ್ರವಾಸದ ವೇಳೆ, ರಾಹುಲ್ ಗಾಂಧಿ ಸ್ಯಾನ್ ಫ್ರಾನ್ಸಿಸ್ಕೋ, ವಾಷಿಂಗ್ಟನ್ ಡಿಸಿ ಮತ್ತು ನ್ಯೂಯಾರ್ಕ್ ನಗರಗಳಿಗೆ ಭೇಟಿ ಕೊಟ್ಟಿದ್ದರು. ಅಲ್ಲಿ ಭಾರತೀಯ ಡಯಾಸ್ಪೊರಾ, ಸಾಹಸೋದ್ಯಮ ಬಂಡವಾಳಗಾರರು ಮತ್ತು ಶಾಸಕರು, ಇತರರೊಂದಿಗೆ ಸಂವಹನ ನಡೆಸಿದ್ದರು. ಇದಕ್ಕೂ ಮುನ್ನ ಅವರು ಬ್ರಿಟನ್ ಪ್ರವಾಸ ಕೈಗೊಂಡಿದ್ದರು. ಆ ವೇಳೆ ಅವರು ಲಂಡನ್ನ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಭಾಷಣದ ವೇಳೆ ಭಾರತೀಯ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿದ್ದರು. ಅವರ ಈ ಭಾಷಣ ಸಾಕಷ್ಟು ಟೀಕೆಗೆ ಒಳಗಾಗಿತ್ತು.
ಅಲ್ಲಿ ನಡೆಸಿದ ಸಂವಾದದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಭಾರತದ ಪ್ರಜಾಪ್ರಭುತ್ವದ ಮೂಲ ರಚನೆಯ ಮೇಲೆ ದಾಳಿ ನಡೆಸಲಾಗುತ್ತಿದೆ ಹಾಗೂ ತಮ್ಮ ಫೋನ್‌ನಲ್ಲಿ ಇಸ್ರೇಲ್ನ ಸ್ಪೈವೇರ್ ಪೆಗಾಸಸ್ ನುಸುಳಿಸಲಾಗಿದೆ ಎಂದು ರಾಹುಲ್ ಆರೋಪಿಸಿದ್ದರು. ತಮ್ಮ ಕರೆಗಳು ರೆಕಾರ್ಡ್ ಆಗುತ್ತಿರುವುದರಿಂದ ಫೋನ್‌ನಲ್ಲಿ ಮಾತನಾಡುವಾಗ ಜಾಗರೂಕರಾಗಿರಿ ಎಂದು ಗುಪ್ತಚರ ಅಧಿಕಾರಿಗಳು ತನಗೆ ಎಚ್ಚರಿಕೆ ನೀಡಿದ್ದಾರೆ ಎಂದು ರಾಹುಲ್ ಹೇಳಿದ್ದರು.
ಹಾಗೆ ನನ್ನ ಫೋನ್‌ನಲ್ಲಿಯೇ ಪೆಗಾಸಸ್ ಸ್ಪೈವೇರ್ ಇತ್ತು. ಬಹುತೇಕ ರಾಜಕಾರಣಿಗಳ ಫೋನ್‌ಗಳಲ್ಲಿ ಪೆಗಾಸಸ್ ಇತ್ತು. ಫೋನ್‌ನಲ್ಲಿ ಮಾತನಾಡುವಾಗ ಜಾಗರೂಕರಾಗಿರಿ ಎಂದು ಗುಪ್ತಚರ ಇಲಾಖೆಯ ಅಧಿಕಾರಿಗಳೇ ನನಗೆ ಕರೆ ಮಾಡಿ ಹೇಳಿದ್ದರು. ಹೇಗೆ ನೋಡಿದರೂ ಕ್ರಿಮಿನಲ್ ಅಲ್ಲದ ವಿಷಯಗಳಲ್ಲಿ ನನ್ನ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಿಳಿಸಿದ್ದರು. ಈ ಹೇಳಿಕೆಯ ಬಳಿಕ ರಾಹುಲ್ ಗಾಂಧಿಯವರು ತಮ್ಮ ಭಾಷಣಗಳಲ್ಲಿ ಭಾರತದ ಪ್ರಜಾಪ್ರಭುತ್ವ, ರಾಜಕೀಯ, ಸಂಸತ್ತು, ರಾಜಕೀಯ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಯನ್ನು ಕೀಳಾಗಿ ತೋರಿಸಲು ಪ್ರಯತ್ನಿಸಿದ್ದಾರೆ ಎಂದು ಬಿಜೆಪಿ ತೀವ್ರ ಸಂಕಟದಿಂದ ಹೇಳಲು ಬಯಸುತ್ತದೆ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಕಿಡಿಕಾರಿದ್ದರು.
ಇದನ್ನೂ ಓದಿ:Rahul Gandhi: ರಕ್ಷಣಾ ಸಂಸದೀಯ ಸ್ಥಾಯಿ ಸಮಿತಿಗೆ ರಾಹುಲ್ ಗಾಂಧಿ ನಾಮನಿರ್ದೇಶನ