ನವದೆಹಲಿ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಸಾಮಾನ್ಯ ಪಾಸ್‌ಪೋರ್ಟ್ ಸ್ವೀಕರಿಸಿದ್ದಾರೆ. ಶುಕ್ರವಾರ ದೆಹಲಿಯ ನ್ಯಾಯಾಲಯವು ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಿ ಮೂರು ವರ್ಷಗಳ ಅವಧಿಗೆ ಪಾಸ್ಪೋರ್ಟ್ಗೆ ಒಪ್ಪಿಗೆ ನೀಡಿತ್ತು. ರಾಹುಲ್ ಗಾಂಧಿ ಹತ್ತು ವರ್ಷಗಳ ಅವಧಿಯ ಪಾಸ್ಪೋರ್ಟ್ಗೆ ಮನವಿ ಮಾಡಿದ್ದರು. ಆದರೆ, ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ಮೂರು ವರ್ಷದ ಅವಧಿಗೆ ಪಾಸ್‌ಪೋರ್ಟ್ ಲಭ್ಯವಾದ ಹಿನ್ನೆಲೆ ಸೋಮವಾರ ಸಂಜೆ ರಾಹುಲ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿಂದ ವಾಷಿಂಗ್ಟನ್ ಡಿಸಿ, ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆಯುವ ಸಭೆಗಳಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದು, ಕ್ಯಾಪಿಟೋಲ್‌ನಲ್ಲಿ ವಾಲ್ ಸ್ಟ್ರೀಟ್ ಅಧಿಕಾರಿಗಳು, ಹಿರಿಯ ಬುದ್ದಿಜೀವಿಗಳೊಂದಿಗೆ ಚರ್ಚೆಯಲ್ಲಿ ಭಾಗವಹಿಸುವರು. ಜೂನ್ 4ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯ ಸಂವಾದದಲ್ಲಿ ಭಾಗವಹಿಸುವದರೊಂದಿಗೆ ಅಮೆರಿಕಾದ ಪ್ರವಾಸಕ್ಕೆ ಅಂತ್ಯ ಹಾಡಲಿದ್ದಾರೆ.
ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್ ತಮ್ಮ ರಾಜತಾಂತ್ರಿಕ ಪಾಸ್‌ಪೋರ್ಟ್ ಅನ್ನೂ ಒಪ್ಪಿಸಿದ್ದರು. ಹೀಗಾಗಿ ಸಾಮಾನ್ಯ ಪಾಸ್ಪೋರ್ಟ್ಗೆ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ರಾಹುಲ್ ಗಾಂಧಿ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿ ಆಗಿದ್ದು, ಅಕ್ರಮ ಹಣ ವರ್ಗಾವಣೆ ಹಾಗೂ ಹಣಕಾಸು ದುರ್ಬಳಕೆ ಆರೋಪಗಳು ಅವರ ಮೇಲಿವೆ ಎಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಆಕ್ಷೇಪ ಸಲ್ಲಿಸಿದ್ದರು.