ವಾರಾಣಾಸಿ(ಉತ್ತರ ಪ್ರದೇಶ): ಪ್ರಯಾಗ್ ರಾಜ್ನ ಆನಂದ್ ಭವನ್ನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕೆ ಹಾಜರಾಗಲು ಬಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಮಾನಕ್ಕೆ ಇಲ್ಲಿ ಲ್ಯಾಂಡಿಂಗ್ಗೆ ಅವಕಾಶ ನಿರಾಕರಣೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಕುರಿತು ಮಾತನಾಡಿರುವ ಕಾಂಗ್ರೆಸ್ ನಾಯಕ ಅಜಯ್ ರಾಯ್, ವಾರಾಣಾಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿ ಅವರ ವಿಮಾನ ಕೆಳಗಿಳಿಯಲು ನಿರಾಕರಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕಾಶಿ ದೇಗುಲಕ್ಕೆ ಭೇಟಿ ನೀಡಲಿರುವ ನೆಪ ಹೇಳಿ ಅವರಿಗೆ ವಾರಾಣಾಸಿಗೆ ಅನುಮತಿ ನಿರಾಕರಿಸಲಾಗಿದೆ. ಆದರೆ, ಉದ್ದೇಶ ಪೂರ್ವಕವಾಗಿ ಅವರು, ಕಾಂಗ್ರೆಸ್ ನಾಯಕನ ವಿಮಾನ ಕೆಳಗಿಳಿಯಲು ಅನುಮತಿ ನೀಡಿಲ್ಲ ಎಂದು ತಿಳಿಸಿದ್ದಾರೆ.
ವಯನಾಡುನಿಂದ ವಾರಾಣಾಸಿಗೆ ಬಂದ ವಿಮಾನ ರಾತ್ರಿ 10. 45ರ ಸುಮಾರಿಗೆ ಕೆಳಗೆ ಇಳಿಯಬೇಕಿತ್ತು. ಆದರೆ ವಿಮಾನ ನಿಲ್ದಾಣ ಪ್ರಾಧಿಕಾರ ಸರ್ಕಾರದ ಒತ್ತಡದ ಹಿನ್ನಲೆ ಅವರ ವಿಮಾನ ಕೆಳಗಿಳಿಯಲು ಅವಕಾಶ ನೀಡಲಿಲ್ಲ. ಅಧಿಕ ಸಂಖ್ಯೆಯ ವಿಮಾನಗಳ ಹಾರಾಟ ಮತ್ತು ಸಂಚಾರ ದಟ್ಟಣೆಯಿಂದಾಗಿ ಈ ಅವಕಾಶ ನಿರಕಾರಿಸುತ್ತಿರುವುದಾಗಿ ಅವರ ತಿಳಿಸಿದ್ದಾರೆ. ಆದರೆ, ಇದರ ಹಿಂದಿನ ಉದ್ದೇಶ ಬೇರೆ ಎಂದಿದ್ದಾರೆ ಎಂದರು.
ಇದೇ ವೇಳೆ ಮುಂದುವರೆದು ಮಾತನಾಡಿದ ರಾಯ್, ಬಿಜೆಪಿ ಸರ್ಕಾರಕ್ಕೆ ರಾಹುಲ್ ಗಾಂಧಿ ಕಂಡರೆ ಭಯ. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದ ಬಳಿಕ ಪ್ರಧಾನಿಗಳು ಚಿಂತಿತರಾಗಿದ್ದಾರೆ. ಈ ಹಿನ್ನಲೆ ಅವರು ಇದೀಗ ಕಾಂಗ್ರೆಸ್ ನಾಯಕನಿಗೆ ತೊಂದರೆ ನೀಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದ ಬಳಿಕ ರಾಹುಲ್ ಗಾಂಧಿ ಸೋಮವಾರ ರಾತ್ರಿ ಕಾಶಿ ವಿಶ್ವನಾಥ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಕೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಬನರಾಸ್ಗೆ ಬಂದ ಬಳಿಕ ಅವರು ಪ್ರಯಾಗ್ ರಾಜ್ಗೆ ತೆರಳಬೇಕಿತ್ತು. ಅವರನ್ನು ಸ್ವಾಗತಿಸಲು ಕಾಂಗ್ರೆಸ್ ನಾಯಕರು ಕೂಡ ಸಿದ್ದರಾಗಿದ್ದರು. ಆದರೆ, ತಕ್ಷಣಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರ ಸಂಚಾರ ದಟ್ಟಣೆ ನೆಪವೊಡ್ಡಿತು ಎಂದು ಆರೋಪಿಸಿದ್ದಾರೆ.