ಇಂದೋರ್: ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಯನ್ನು ಗೋಡ್ಸೆ ಜೀ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಾಯಿ ತಪ್ಪಿ ಸಂಬೋಧಿಸಿದ್ದಾರೆ. ಆದರೆ ತಕ್ಷಣ ಅಚಾತುರ್ಯ ಅರಿತುಕೊಂಡ ಅವರು, ತಪ್ಪಾಗಿ ಹಾಗೆ ಕರೆದೆ ಎಂದು ಹೇಳಿದ್ದಾರೆ.
ಇಲ್ಲಿನ ಮೊವ್‌ನಲ್ಲಿರುವ ಡಾ. ಭೀಮರಾವ್ ಅಂಬೇಡ್ಕರ್ ಅವರ ಜನ್ಮಸ್ಥಳಕ್ಕೆ ಆಗಮಿಸಿದ ರಾಹುಲ್, ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದರು ಮತ್ತು ಡಾ. ಅಂಬೇಡ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ತಮ್ಮ ಭಾಷಣದ ವೇಳೆ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಾರತದ ಸಂವಿಧಾನವು ಜೀವಂತ ಶಕ್ತಿಯಾಗಿದೆ. ಇದು 134 ಕೋಟಿ ಜನರ ನಂಬಿಕೆಯಾಗಿದೆ. ಆದರೆ ಕೆಲವರು ಅದನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಟೀಕಿಸಿದರು.
ಮೊವ್‌ನಲ್ಲಿ ರಾಹುಲ್ ಕಾರ್ಯಕ್ರಮದ ವೇಳೆ ಬಹಳ ಹೊತ್ತು ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಆದರೆ ಸ್ಥಳದಲ್ಲಿ ಜನರೇಟರ್ ಸಹಾಯದಿಂದ ವಿದ್ಯುತ್ ವ್ಯವಸ್ಥೆ ಮಾಡಲಾಗಿತ್ತು. ಅಂಬೇಡ್ಕರ್ ಸ್ಮಾರಕಕ್ಕೆ ನಮನ ಸಲ್ಲಿಸಿದ ನಂತರ ಡ್ರೀಮ್‌ಲ್ಯಾಂಡ್‌ನಲ್ಲಿ ನಡೆದ ಸಭೆಯನ್ನುದ್ದೇಶಿಸಿ ರಾಹುಲ್ ಮಾತನಾಡಿದರು. ಈ ವೇಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಮಲ್ ನಾಥ್, ದಿಗ್ವಿಜಯ್ ಸಿಂಗ್, ಜೈರಾಮ್ ರಮೇಶ್, ರಾಜ್ಯ ಉಸ್ತುವಾರಿ ಜೆಪಿ ಅಗರ್ವಾಲ್, ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ವೇದಿಕೆಯಲ್ಲಿದ್ದರು.
ಭಾರತ್ ಜೋಡೋ ಯಾತ್ರೆ ಯಾತ್ರೆ ಭಾನುವಾರ ಇಂದೋರ್‌ನಲ್ಲಿ ಉಳಿಯಲಿದೆ. ನುಕ್ಕಡ್ ಸಭೆಯೊಂದಿಗೆ ಅಹಲ್ಯಾ ದೇವಿಯ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮವಿದೆ. ಇಂದೋರ್ ನಂತರ, ಯಾತ್ರೆಯು ಉಜ್ಜಯಿನಿ ಮತ್ತು ಅಗರ್-ಮಾಲ್ವಾ ಜಿಲ್ಲೆಗಳ ಮೂಲಕ ಹಾದು ಡಿಸೆಂಬರ್ 4 ರಂದು ರಾಜಸ್ಥಾನದ ಗಡಿಯನ್ನು ಪ್ರವೇಶಿಸಲಿದೆ.
ಇದನ್ನೂ ಓದಿ: ಕಾಂಗ್ರೆಸ್ ತೆಕ್ಕೆಗೆ ಮರಳಲು ದಲಿತರು ಉತ್ಸುಕ: ಎಐಸಿಸಿ ಸಂಯೋಜಕ ಕೆ. ರಾಜು