ಚಂಡೀಗಢ: ಪಂಜಾಬ್‌ನಲ್ಲಿ ಪ್ರವಾಹ ಎಲ್ಲೆಡೆ ಅವಾಂತರ ಸೃಷ್ಟಿಸಿದೆ. ಸುಮಾರು 500 ಗ್ರಾಮಗಳು ಪ್ರವಾಹಕ್ಕೆ ಸಿಲುಕಿವೆ. ರಾಜ್ಯದ 13 ಜಿಲ್ಲೆಗಳು ಪ್ರವಾಹದಿಂದ ಹೆಚ್ಚು ಹಾನಿಗೊಳಗಾಗಿವೆ. ಪಂಜಾಬ್‌ನಲ್ಲಿ ಪ್ರವಾಹದಿಂದಾಗಿ 11 ಸಾವುಗಳು ದೃಢಪಟ್ಟಿದ್ದು, ಅನೇಕ ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಪ್ರವಾಹ ಪೀಡಿತ ಬಹುತೇಕ ಗ್ರಾಮಗಳು ನದಿಯ ಸಮೀಪ ಮತ್ತು ಗಡಿ ಪ್ರದೇಶಗಳಲ್ಲಿವೆ. ಎನ್‌ಡಿಆರ್‌ಎಫ್‌ನ 14 ತಂಡಗಳನ್ನು ಪಂಜಾಬ್‌ನಾದ್ಯಂತ ನಿಯೋಜಿಸಲಾಗಿದೆ. ಎಸ್‌ಡಿಆರ್‌ಎಫ್‌ನ 2 ತಂಡಗಳು ನಿರ್ದಿಷ್ಟವಾಗಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿವೆ. ಅಷ್ಟೇ ಅಲ್ಲ ಭಾರತೀಯ ಸೇನಾ ಪಡೆಗಳ ಸಹಾಯವನ್ನು ಸಹ ಪಡೆಯಲಾಗಿದೆ. ಪಟಿಯಾಲ, ಫಿರೋಜ್‌ಪುರ, ಫತೇಘರ್ ಸಾಹಿಬ್, ಜಲಂಧರ್, ಪಠಾಣ್‌ಕೋಟ್ ಮತ್ತು ರೋಪರ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಶನಿವಾರದಿಂದ ಸೋಮವಾರದವರೆಗೆ ಪಂಜಾಬ್‌ನಲ್ಲಿ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಇದರಿಂದಾಗಿ ಇಂತಹ ಪರಿಸ್ಥಿತಿಗಳು ಉದ್ಭವಿಸಿವೆ. ಆದರೆ, ನಿನ್ನೆಯಿಂದ ಮಳೆ ನಿಂತ್ತಿದ್ದು ಕೊಂಚ ಸಂತಸ ತಂದಿದೆ.
ಸದ್ಯದ ಪರಿಸ್ಥಿತಿ ಹೀಗಿದೆ:ಫಿರೋಜ್‌ಪುರದ ಸಟ್ಲೆಜ್ ನದಿಗೆ ನಿರ್ಮಿಸಲಾದ ಹಜಾರೆ ಸೇತುವೆ ಕೊಚ್ಚಿಹೋಗಿದೆ. ಇದರಿಂದಾಗಿ ಸುಮಾರು 24ಕ್ಕೂ ಹೆಚ್ಚು ಹಳ್ಳಿಗಳು ಬಾಧಿತವಾಗಿವೆ. ಫಿರೋಜ್‌ಪುರದ ಸುಮಾರು 60 ಗ್ರಾಮಗಳು ನೀರಿನಲ್ಲಿ ಮುಳುಗಿವೆ. ಪಟಿಯಾಲದಲ್ಲಿ ಪತ್ತಾರ್ - ಖನೋರಿ ಸೇತುವೆ ಕುಸಿದಿದೆ. ಇದರಿಂದಾಗಿ ದೆಹಲಿಯಿಂದ ಸಂಗ್ರೂರ್ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಲಂಧರ್‌ನ ಶಾಹಕೋಟ್‌ನಲ್ಲಿ ಪ್ರವಾಹದ ಕಾರಣ ನಿವೃತ್ತ ಶಿಕ್ಷಕನ ಅಂತ್ಯಕ್ರಿಯೆಯನ್ನು ರಸ್ತೆಯ ಮೇಲೆಯೇ ಮಾಡಬೇಕಾಯಿತು. ಇಲ್ಲಿನ ಚಿತಾಗಾರವೂ ಪ್ರವಾಹದ ನೀರಿನಲ್ಲಿ ಮುಳುಗಿದೆ.
ಪ್ರವಾಹದ ಹಿಡಿತದಲ್ಲಿ ಸುಮಾರು 500 ಗ್ರಾಮಗಳು:ಅಂಕಿಅಂಶಗಳ ಪ್ರಕಾರ ಸುಮಾರು 500 ಹಳ್ಳಿಗಳು ಪ್ರಸ್ತುತ ಪ್ರವಾಹದ ಹಿಡಿತದಲ್ಲಿವೆ. ಅವುಗಳಲ್ಲಿ ಮೊಹಾಲಿ ಜಿಲ್ಲೆಯ 268 ಗ್ರಾಮಗಳು, ರೋಪರ್‌ನ 140 ಗ್ರಾಮಗಳು, ಹೋಶಿಯಾರ್‌ಪುರದ 25 ಗ್ರಾಮಗಳು ಮತ್ತು ಮೊಗಾದ 30 ಗ್ರಾಮಗಳು ಸೇರಿವೆ. ಪಟಿಯಾಲದ ನೂರಾರು ಹಳ್ಳಿಗಳು ಪ್ರವಾಹಕ್ಕೆ ಸಿಲುಕಿವೆ. ಡೇರಾ ಬಸ್ಸಿಯಲ್ಲಿ 25 ಮಂದಿ ಸಿಕ್ಕಿಬಿದ್ದಿದ್ದು, NDRF ರಕ್ಷಣಾ ಕಾರ್ಯ ಕೈಗೊಂಡಿದೆ. ಖನ್ನಾ, ನವನ್‌ಶಹರ್, ಜಾಗರಾನ್ ಮತ್ತು ತರ್ನ್ ತರನ್‌ನ 138 ಹಳ್ಳಿಗಳ ಸ್ಥಿತಿಯಲ್ಲಿ ಸಂಪೂರ್ಣ ಹದಗೆಟ್ಟಿದೆ. ಪಂಜಾಬ್ ಮುಖ್ಯ ಕಾರ್ಯದರ್ಶಿ ಅನುರಾಗ್ ವರ್ಮಾ ಅವರು ಎಲ್ಲಾ ಜಿಲ್ಲೆಗಳ ಡಿಸಿಗಳ ಸಭೆಯನ್ನು ನಡೆಸಿದ್ದು, ಇದರಲ್ಲಿ ವಿವಿಧ ಜಿಲ್ಲೆಗಳಲ್ಲಿನ ಪ್ರವಾಹ ಪರಿಸ್ಥಿತಿಯ ಹೊರತಾಗಿ, ಮಜೆ ಮತ್ತು ದೋಬಾದಲ್ಲಿನ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆಯೂ ಚರ್ಚಿಸಲಾಗಿದೆ.
ಕಪುರ್ತಲಾ ಮತ್ತು ಜಲಂಧರ್ ಪ್ರದೇಶಕ್ಕೂ ಹಾನಿ:ಸಟ್ಲೆಜ್ ನದಿಯ ಗಡಿಯಲ್ಲಿರುವ ಕಪುರ್ತಲಾ ಮತ್ತು ಜಲಂಧರ್ ಪ್ರದೇಶಗಳು ಪ್ರವಾಹಕ್ಕೆ ಒಳಗಾಗಿವೆ. ಇಲ್ಲಿನ 50ಕ್ಕೂ ಹೆಚ್ಚು ಗ್ರಾಮಗಳನ್ನು ಈಗಾಗಲೇ ತೆರವು ಮಾಡಲಾಗಿದೆ. ಧುಸಿ ಅಣೆಕಟ್ಟು ಬಿರುಕು ಬಿಟ್ಟಿದ್ದರಿಂದ ದೊಡ್ಡ ಸಮಸ್ಯೆ ಎದುರಾಗಿದೆ. ನಿನ್ನೆ ಷಾಕೋಟ್‌ನ ಲೋಹಿಯಾನ್‌ನ ಧುಸಿ ಅಣೆಕಟ್ಟು ಎರಡು ಕಡೆ ಬಿರುಕು ಬಿಟ್ಟ ಪರಿಣಾಮ ಸಾಕಷ್ಟು ನೀರು ಗ್ರಾಮಗಳಿಗೆ ನುಗ್ಗಿತ್ತು. ಆಣೆಕಟ್ಟನ್ನು ಸರಿಪಡಿಸಲು ರಾಜ್ಯಸಭಾ ಸದಸ್ಯ ಬಲಬೀರ್ ಸಿಂಗ್ ಸೀಚೆವಾಲ್ ಕ್ರಮ ಕೈಗೊಂಡಿದ್ದಾರೆ.