ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದು, ಫಲಿತಾಂಶಕ್ಕಾಗಿ ನಿರೀಕ್ಷಿಸಲಾಗುತ್ತಿದೆ. ಫಲಿತಾಂಶ ಬಂದ ಒಂದು ತಿಂಗಳಿಗೆ ಮತ್ತೊಂದು ಚುನಾವಣೆ ನಡೆಯಲಿದ್ದು, ಈಗಾಗಲೇ ಸಿದ್ಧತೆ ಆರಂಭಗೊಂಡಿದೆ. ಹೌದು, ವಿಧಾನಸಭಾ ಚುನಾವಣೆ ನಂತರ ರಾಜ್ಯಸಭಾ ಚುನಾವಣೆಗೆ ಪಂಜಾಬ್ ಸಜ್ಜಾಗುತ್ತಿದೆ. ಕಾಂಗ್ರೆಸ್‌ನಿಂದ ಮೂವರು ಮತ್ತು ಅಕಾಲಿದಳದಿಂದ ಇಬ್ಬರು ಸೇರಿದಂತೆ ಐವರು ರಾಜ್ಯಸಭಾ ಸದಸ್ಯರು ಏಪ್ರಿಲ್ 9ರಂದು ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ. ಇವರ ಸ್ಥಾನ ತುಂಬಲು ಚುನಾವಣೆ ನಡೆಯಲಿದ್ದು, ಈಗಿನ ಪರಿಸ್ಥಿತಿಯಲ್ಲಿ ಒಂದೊಂದು ಸ್ಥಾನವನ್ನು ಗೆಲ್ಲುವುದು ಕಷ್ಟ ಎಂಬಂತ ಪರಿಸ್ಥಿತಿ ನಿರ್ಮಾಣವಾಗಲಿದೆ.
ಪಂಜಾಬ್‌ನಲ್ಲಿ ಒಟ್ಟು ಏಳು ರಾಜ್ಯಸಭಾ ಸ್ಥಾನಗಳಿದ್ದು, ಈ ಪೈಕಿ ಐದು ಸ್ಥಾನಗಳು ತೆರವಾಗಲಿವೆ. ಈ ಐದು ಸ್ಥಾನಗಳಿಗೆ ಚುನಾವಣೆ ನಡೆಸಲು ಪ್ರಕ್ರಿಯೆಗಳು ಆರಂಭವಾಗಿವೆ. ಉಳಿದ ಎರಡು ಸ್ಥಾನಗಳಿಗೆ ಜುಲೈ ಒಳಗೆ ಚುನಾವಣೆ ನಡೆಯಲಿದೆ. ಈ ಎರಡು ಸ್ಥಾನಗಳಲ್ಲಿ ಒಂದರಲ್ಲಿ ಬಿಜೆಪಿ ಹಾಗೂ ಮತ್ತೊಂದರಲ್ಲಿ ಅಕಾಲಿದಳದ ಅಭ್ಯರ್ಥಿಗಳಿದ್ದಾರೆ. ಈಗ ನಡೆಸಲಾಗುವ ರಾಜ್ಯಸಭಾ ಚುನಾವಣೆಗೆ ಮಾರ್ಚ್‌ನಲ್ಲಿ ಅಧಿಸೂಚನೆ ಹೊರಬೀಳಲಿದೆ ಎಂದು ಅಂದಾಜಿಸಲಾಗಿದೆ.
ಇದಕ್ಕಾಗಿ ಪಂಜಾಬ್ ವಿಧಾನಸಭೆ ಚುನಾವಣಾಧಿಕಾರಿಗಳ ಪಟ್ಟಿಯನ್ನು ಭಾರತದ ಚುನಾವಣಾ ಆಯೋಗಕ್ಕೆ ಕಳುಹಿಸಿದೆ. ಕಾಂಗ್ರೆಸ್‌ನ ಸದಸ್ಯರಾದ ಪರ್ತಾಪ್ ಸಿಂಗ್ ಬಾಜ್ವಾ, ಶಂಶೇರ್ ಸಿಂಗ್ ಡುಲ್ಲೋ ಮತ್ತು ಅಂಬಿಕಾ ಸೋನಿ ಹಾಗೂ ಅಕಾಲಿದಳದ ಸುಖದೇವ್ ಸಿಂಗ್ ಧಿಂಡ್ಸಾ, ನರೇಶ್ ಗುಜ್ರಾಲ್ ಅವಧಿ ಮುಗಿಯಲಿರುವ ರಾಜ್ಯಸಭಾ ಸದಸ್ಯರಾಗಿದ್ದಾರೆ. ಆದರೆ, ಪ್ರಸ್ತುತ ಸುಖದೇವ್ ಸಿಂಗ್ ಅವರು ಪ್ರತ್ಯೇಕ ಪಕ್ಷವನ್ನು ಸ್ಥಾಪನೆ ಮಾಡಿದ್ದು, ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದಾರೆ.
20 ಶಾಸಕರ ಬೆಂಬಲ ಅಗತ್ಯ:ರಾಜ್ಯಸಭಾ ಸದಸ್ಯರ ಆಯ್ಕೆಯ ಲೆಕ್ಕಾಚಾರದ ಪ್ರಕಾರ ಒಬ್ಬ ಸದಸ್ಯರ ಆಯ್ಕೆಗೆ ಸುಮಾರು 20 ಶಾಸಕರ ಬೆಂಬಲ ಬೇಕಾಗುತ್ತದೆ. ಅದರಂತೆ, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಪಕ್ಷವು ಸ್ವತಂತ್ರವಾಗಿ ತನ್ನ ರಾಜ್ಯಸಭಾ ಸದಸ್ಯರನ್ನಾಗಿ ಆಯ್ಕೆ ಮಾಡಬಹುದಾಗಿದೆ. ಆದ್ದರಿಂದ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಸಾಕಷ್ಟು ಗೊಂದಲ ಉಂಟಾಗಬಹುದು ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಮೊದಲು ಪಂಜಾಬ್‌ನಲ್ಲಿ ಅಕಾಲಿದಳ - ಬಿಜೆಪಿ ಮೈತ್ರಿಕೂಟ ಮತ್ತು ಕಾಂಗ್ರೆಸ್ ಮಾತ್ರ ವಿಧಾನಸಭೆ ಸ್ಥಾನಗಳನ್ನು ಹೊಂದಿದ್ದವು. ಆದ್ದರಿಂದ, ಪರಸ್ಪರ ಒಪ್ಪಿಗೆಯಿಂದ ಚುನಾವಣೆಗಳು ನಡೆದವು. ಮತದಾನದ ಅಗತ್ಯವೇ ಇರಲಿಲ್ಲ. ಆದರೆ, ಈ ಬಾರಿ ರಾಜ್ಯಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಶಾಸಕರಿದ್ದಾರೆ. ಪಂಜಾಬ್‌ನಿಂದ ರಾಜ್ಯಸಭೆ ಪ್ರವೇಶಿಸಲು ಆಮ್ ಆದ್ಮಿ ಪಕ್ಷಕ್ಕೂ ಅವಕಾಶ ಸಿಗುವ ಸಾಧ್ಯತೆ ಇದೆ.