ಮುಂಬೈ :ಒಟಿಟಿ ಜಗತ್ತಿನಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ ಟಕ್ಕರ್ ಕೊಡಲು ಅಮೇಜಾನ್ ಸಜ್ಜಾಗಿದೆ. ಅಮೇಜಾನ್ ಪ್ರೈಮ್ ವಿಡಿಯೋಗೆ ಭಾರತದಲ್ಲಿ ಹಲವು ಸ್ಪರ್ಧಿಗಳಿದ್ದಾರೆ. ಈ ಸ್ಪರ್ಧೆಯನ್ನು ಎದುರಿಸಲು ಈ ಒಟಿಟಿ ಸಂಸ್ಥೆ ಹೊಸ ತಂತ್ರಗಾರಿಕೆ ರೂಪಿಸುತ್ತಿದೆ. ಭಾರತದಲ್ಲಿ ತನ್ನ ಹೂಡಿಕೆಯನ್ನು ದ್ವಿಗುಣಗೊಳಿಸಿರುವ ಅಮೇಜಾನ್ ಮುಂದಿನ ಎರಡು ವರ್ಷಗಳಲ್ಲಿ 40ಕ್ಕೂ ಹೆಚ್ಚು ಹೊಸ ಶೋ/ವೆಬ್ ಸೀರಿಸ್ಗಳ ಟೈಟಲ್ ಅನಾವರಣಗೊಂಡಿದೆ. ಈ ಮೂಲಕ ಸಿನಿಪ್ರಿಯರಿಗೆ ಬಂಪರ್ ಕೊಡುಗೆ ನೀಡಿದೆ.
41 ಶೀರ್ಷಿಕೆಗಳ ಪೈಕಿ ಕೆಲವು ಅಮೇಜಾನ್ ಪ್ರೈಮ್ ವಿಡಿಯೋ ಒರಿಜಿನಲ್ ಕಂಟೆಂಟ್ ಆಗಿದೆ. ಇನ್ನೂ ಕೆಲವು ಸಿನಿಮಾ/ವೆಬ್ ಸೀರಿಸ್ಗಳನ್ನು ನಿರ್ಮಾಣ ಮಾಡಲು ಯಶ್ ರಾಜ್ ಫಿಲ್ಮ್ಸ್, ಧರ್ಮ ಪ್ರೊಡಕ್ಷನ್, ಅಜಯ್ ದೇವಗನ್ ಫಿಲ್ಮ್ಸ್, ಎಕ್ಸೆಲ್ ಮೀಡಿಯಾ ಸೇರಿ ಹಲವು ನಿರ್ಮಾಣ ಸಂಸ್ಥೆಗಳ ಜತೆ ಅಮೇಜಾನ್ ಪ್ರೈಮ್ ವಿಡಿಯೋ ಕಂಪನಿ ಕೈಜೋಡಿಸಿದೆ.
ನಿನ್ನೆ ಮುಂಬೈನಲ್ಲಿ ತನ್ನ ವಿಸ್ತಾರಣಾ ಯೋಜನೆ ಕುರಿತು ಕಾರ್ಯಕ್ರಮವನ್ನು ಅಮೇಜಾನ್ ಪ್ರೈಮ್ ವಿಡಿಯೋ ಏರ್ಪಡಿಸಿತ್ತು. ಪ್ರೈಮ್ ವಿಡಿಯೋ ಪ್ರೆಸೆಂಟ್ಸ್ ಇಂಡಿಯಾ ಕಾರ್ಯಕ್ರಮದಲ್ಲಿ ಅಜಯ್ ದೇವಗನ್, ಅಭಿಷೇಕ್ ಬಚ್ಚನ್, ಚಲನಚಿತ್ರ ನಿರ್ಮಾಪಕರಾದ ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ, ರೋಹಿತ್ ಶೆಟ್ಟಿ ಹಾಗೂ ಕರಣ್ ಜೋಹರ್ ಸೇರಿದಂತೆ ಭಾರತೀಯ ಚಲನಚಿತ್ರ ಗಣ್ಯರು ಭಾಗವಹಿಸಿದ್ದರು.
ಅಮೇಜಾನ್ ಪ್ರೈಮ್ ವಿಡಿಯೋ ಒರಿಜಿನಲ್ ಕಂಟೆಂಟ್ ಕೆಟಗರಿಯಲ್ಲಿ ಪ್ರಸಾರ ಕಂಡ ಪಂಕಜ್ ತ್ರಿಪಾಟಿ ನಟನೆಯ ‘ಮಿರ್ಜಾಪುರ್’, ಮನೋಜ್ ಬಾಜಪೇಯಿ ಅಭಿನಯದ ‘ದಿ ಫ್ಯಾಮಿಲಿ ಮ್ಯಾನ್’, ಅಭಿಷೇಕ್ ಬಚ್ಚನ್ ನಟನೆಯ ‘ಬ್ರೀತ್: ಇಂಟು ದಿ ಶ್ಯಾಡೋಸ್’ ಮೆಚ್ಚುಗೆ ಪಡೆದುಕೊಂಡಿವೆ. ಇವುಗಳ ಸೀಕ್ವೆಲ್ಗಳು ರೆಡಿ ಆಗುತ್ತಿವೆ.
ಓದಿ:ಅಮೆಜಾನ್ ಪ್ರೈಮ್ನಲ್ಲಿ 'ಮ್ಯಾನ್ ಆಫ್ ದಿ ಮ್ಯಾಚ್' ಬಿಡುಗಡೆ
ನಮ್ಮ ಇಂಡಿಯನ್ ಒರಿಜಿನಲ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ಐದು ವರ್ಷಗಳಲ್ಲಿ ಹೂಡಿಕೆಯನ್ನು ದ್ವಿಗುಣಗೊಳಿಸುವುದು ನಮ್ಮ ಯೋಜನೆಯಾಗಿದೆ. ನಾವು ಉತ್ಸುಕರಾಗಿದ್ದೇವೆ, ಇದು ಕೇವಲ ಪ್ರಾರಂಭವಾಗಿದೆ ಎಂದು ಅಮೇಜಾನ್ ಪ್ರೈಮ್ ವಿಡಿಯೋ ಕಂಪನಿಯ ಸದಸ್ಯ ಕೆಲ್ಲಿ ಡೇ ನಿಖರವಾದ ಮಾಹಿತಿಗಳನ್ನು ಬಹಿರಂಗಪಡಿಸದೆ ಹೇಳಿದರು.
ಸೀಕ್ವೆಲ್ಗಳೊಂದಿಗೆ ಬರಲಿರುವ ಶೋಗಳ ಪೈಕಿ ‘ಮಿರ್ಜಾಪುರ್ 3’, ‘ದಿ ಫ್ಯಾಮಿಲಿ ಮ್ಯಾನ್ 3’, ‘ಪಂಚಾಯತ್ 2’, ‘ಪಾತಾಳ್ ಲೋಕ್ 2’ ಬಗ್ಗೆ ಹೆಚ್ಚು ನಿರೀಕ್ಷೆ ಇದೆ. ಹೊಸ ಶೀರ್ಷಿಕೆಗಳ ಪೈಕಿ, ‘ಅಧುರಾ’, ‘ಬಂಬೈ ಮೇರಿ ಜಾನ್’, ‘ಫರ್ಜಿ’, ‘ಹಶ್ ಹಶ್’, ‘ಮಾಡರ್ನ್ ಲವ್ ಮುಂಬೈ’ ಮೊದಲಾದ ಶೀರ್ಷಿಕೆಗಳು ಗಮನ ಸೆಳೆದಿವೆ. ಇವಿಷ್ಟು ಹಿಂದಿಗೆ ಸಂಬಂಧಿಸಿದ ಶೋ/ಸಿನಿಮಾಗಳಾದರೆ, ‘ಮಾಡರ್ನ್ ಲವ್ ಚೆನ್ನೈ’, ‘ಮಾಡರ್ನ್ ಲವ್ ಹೈದರಾಬಾದ್’ ಶೋಗಳ ಶೀರ್ಷಿಕೆ ಗಮನ ಸೆಳೆಯುತ್ತಿವೆ.
ಅಮೇಜಾನ್ ಸ್ಟುಡಿಯೋದ ಮುಖ್ಯಸ್ಥ ಜೆನ್ನಿಫರ್ ಸಾಲ್ಕೆ ಮಾತನಾಡಿ, ಹೊಸ ಧ್ವನಿಗಳನ್ನು ಹುಡುಕುವುದು ಮತ್ತು ವೈವಿಧ್ಯಮಯ ಕಥೆಗಳನ್ನು ಬೆಂಬಲಿಸುವುದು ನನಗೆ ಅತ್ಯುನ್ನತವಾಗಿದೆ. ಇದರಿಂದಾಗಿ ವೈವಿಧ್ಯಮಯವಾಗಿರುವ ನಮ್ಮ ಗ್ರಾಹಕರ ಬಗ್ಗೆ ಯೋಚಿಸಿದಂತಾಗಿದೆ. ನಮ್ಮಲ್ಲಿ ಅರ್ಧದಷ್ಟು ಮಹಿಳಾ ನಿರ್ಮಾಪಕರು, 30 ಪ್ರತಿಶತ ಮಹಿಳಾ ನಿರ್ದೇಶಕರಿಂದ ಕೆಲಸ ಶುರುವಾಗಿದೆ ಎಂದು ಅವರು ಹೇಳಿದರು.
41 ಶೀರ್ಷಿಕೆಗಳಲ್ಲಿ ಭಾರತೀಯ ಭಾಷೆಗಳ ಶೀರ್ಷಿಕೆಗಳನ್ನು ಸಹ ಒಳಗೊಂಡಿದೆ. ಡಿಜಿಟಲ್ ಲೋಕಕ್ಕೆ ಪ್ರವೇಶಿಸುತ್ತಿರುವ ನಾಗ ಚೈತನ್ಯ ಅಭಿನಯದ ತೆಲುಗಿನ ‘ಧೂತ’ ಸಿರೀಸ್ ಸೇರಿದಂತೆ ನಟ ಆರ್ಯ ಅಭಿನಯದ ಚೊಚ್ಚಲ ಸಿರೀಸ್ ತಮಿಳಿನ ‘ದಿ ವಿಲೇಜ್’, ಪುಷ್ಕರ್ ಮತ್ತು ಗಾಯತ್ರಿ ರಚಿಸಿದ ‘ಸುಝಲ್ ದಿ ವೋರ್ಟೆಕ್ಸ್’, ‘ವಧಂಧಿ : ದಿ ಫೇಬಲ್ ಆಫ್ ವೆಲೋನಿ’ ಮುಂತಾದ ಹಲವಾರು ಭಾಷೆಯ ಸಿರೀಸ್ಗಳು ಸೇರಿವೆ.
ಅಮೇಜಾನ್ ಪ್ರೈಮ್ ವಿಡಿಯೋ ಹಾಗೂ ನೆಟ್ಫ್ಲಿಕ್ಸ್ ನಡುವೆ ಭರ್ಜರಿ ಸ್ಪರ್ಧೆ ಏರ್ಪಟ್ಟಿದೆ. ಭಾರತದಲ್ಲಿ ಒರಿಜಿನಲ್ ಸೀರಿಸ್ಗಳನ್ನು ನಿರ್ಮಾಣ ಮಾಡಲು ನೆಟ್ಫ್ಲಿಕ್ಸ್ ಹಿಂದೇಟು ಹಾಕುತ್ತಿದ್ರೆ, ಇದರ ಲಾಭವನ್ನು ಪಡೆಯಲು ಅಮೇಜಾನ್ ಪ್ರೈಮ್ ವಿಡಿಯೋ ಮುಂದಕ್ಕೆ ಬಂದಿದೆ. ಅಷ್ಟೇ ಅಲ್ಲ, ಮುಂದಿನ ಐದು ವರ್ಷಗಳಲ್ಲಿ ಬಂಡವಾಳವನ್ನು ದ್ವಿಗುಣಗೊಳಿಸಲಿದೆ.