ನವದೆಹಲಿ:ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿ ರಾಜಕೀಯ ಕಲಹಕ್ಕೂ ನಾಂದಿ ಹಾಡಿರುವ ಮಣಿಪುರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿ, ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಸರ್ವಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.
ಕೆಂಪುಕೋಟೆಯಲ್ಲಿ 77ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ತ್ರಿವರ್ಣ ಧ್ವಜ ಹಾರಿಸಿ ಭಾಷಣ ಮಾಡಿದ ಅವರು, ಈ ವರ್ಷದ ಮೇ ತಿಂಗಳಿನಿಂದ ಮಣಿಪುರದಲ್ಲಿ ತೀವ್ರ ಹಿಂಸಾಚಾರ ನಡೆಯುತ್ತಿದೆ. ಜನಾಂಗೀಯ ಕಲಹಕ್ಕೆ ತುತ್ತಾದ ಜನರೊಂದಿಗೆ ದೇಶಗಿದೆ. ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ, ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳ ಬಗ್ಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿಯ ಮೂಲಕ ಪರಿಹಾರದ ಮಾರ್ಗವನ್ನು ಕಂಡುಕೊಳ್ಳಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಸ್ಯೆ ಪರಿಹಾರಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿವೆ. ನಾವು ಇದನ್ನು ಮುಂದುವರಿಸುತ್ತೇವೆ ಎಂದೂ ಇದೇ ವೇಳೆ ಹೇಳಿದರು.
ಕೆಲವು ಚಿಕ್ಕ ಘಟನೆಗಳು ಭವಿಷ್ಯದಲ್ಲಿ ದೊಡ್ಡ ಹೊಡೆತಗಳಿಗೆ ಕಾರಣವಾಗುತ್ತವೆ. ಮಣಿಪುರ ವಿಚಾರವನ್ನು ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು. ರಾಜ್ಯದಲ್ಲಿ ಶಾತಿಯನ್ನು ನೆಲೆಗಾಣಿಸುವುದೇ ಸರ್ಕಾರಗಳ ಕೊನೆಯ ಉದ್ದೇಶ ಎಂದು ಪ್ರಧಾನಿ ವಿವರಿಸಿದರು.