ನವದೆಹಲಿ:ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ, ಅಮಾನವೀಯವಾಗಿ ನಡೆದುಕೊಂಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಮಹಿಳೆಯರನ್ನು ಗೌರವಿಸದ ಸಮಾಜ ತೃಣಕ್ಕೆ ಸಮ. ಇಂತಹ ಘಟನೆ ನಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇಂದು ಸಂಸತ್ ಅಧಿವೇಶನ ಆರಂಭಕ್ಕೂ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಣಿಪುರದ ಈ ಅಮಾನವೀಯ ಕೃತ್ಯವು ನನ್ನನ್ನು ತೀವ್ರ ಘಾಸಿ ಮಾಡಿದೆ. ನಾಗರಿಕ ಸಮಾಜಕ್ಕೆ ಇದು ನಾಚಿಕೆಗೇಡಿನ ಸಂಗತಿ. ಮಹಿಳೆಯರ ಗೌರವ ಕಾಪಾಡಲು ಎಲ್ಲ ರಾಜ್ಯಗಳ ಸಿಎಂಗಳು ಕಾನೂನು ಮತ್ತು ಸುವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕು ಎಂದು ಸಲಹೆ ನೀಡಿದರು.
ವಿಶೇಷವಾಗಿ ನಾನು ಮಹಿಳೆಯರ ಭದ್ರತೆಗಾಗಿ ಒತ್ತಾಯಿಸುತ್ತೇನೆ. ಮಹಿಳೆಯರ ವಿರುದ್ಧ ನಡೆಯುವ ಎಂಥದ್ದೇ ಘಟನೆಗಳಿಗೆ ದೃಢವಾದ ಕ್ರಮಗಳನ್ನು ಕೈಗೊಳ್ಳಿ. ರಾಜಸ್ಥಾನ, ಮಣಿಪುರ ಹಾಗೂ ಛತ್ತೀಸ್‌ಗಢವಲ್ಲದೇ, ದೇಶದ ಯಾವುದೇ ಮೂಲೆಯಲ್ಲಿ ಇಂತಹ ಘಟನೆ ನಡೆಯಲಿ ಕಠಿಣ ಕ್ರಮ ಜರುಗಿಸಿ. ರಾಜಕೀಯಕ್ಕೂ ಮಿಗಿಲಾಗಿ ಇದರ ವಿರುದ್ಧ ಕ್ರಮವಾಗಬೇಕು ಎಂದು ಹೇಳಿದರು.
ಮಣಿಪುರ ಘಟನೆಯನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ಈ ಕೃತ್ಯದಲ್ಲಿ ಭಾಗಿಯಾದ ಯಾವುದೇ ತಪ್ಪಿತಸ್ಥರನ್ನು ಬಿಡುವುದಿಲ್ಲ ಎಂದು ನಾನು ರಾಷ್ಟ್ರಕ್ಕೆ ಭರವಸೆ ನೀಡುತ್ತೇನೆ. ಕಾನೂನು ತನ್ನ ಶಕ್ತಿಯನ್ನು ತೋರಿಸುತ್ತದೆ. ಹೆಣ್ಣುಮಕ್ಕಳೊಂದಿಗೆ ನಡೆದ ಅಮಾನವೀಯತೆಯನ್ನು ಸಮಾಜ ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಮರಣದಂಡನೆ ಶಿಕ್ಷೆಗೆ ಯತ್ನ- ಮಣಿಪುರ ಸಿಎಂ:ಮಹಿಳೆಯೆ ಬೆತ್ತಲೆ ಮೆರವಣಿಗೆ ಘಟನೆಗೆ ಸಂಬಂಧಿಸಿದಂತೆ ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಟ್ವೀಟ್ ಮಾಡಿದ್ದು, ವೈರಲ್ ಆಗಿರುವ ಮಹಿಳೆಯರ ವಿಡಿಯೋ ಕಂಡು ಆಘಾತವಾಗಿದೆ. ಅಮಾನವೀಯ ಕೃತ್ಯಕ್ಕೆ ಒಳಗಾದ ಅವರ ಪರವಾಗಿ ನನ್ನ ಹೃದಯ ಮಿಡಿಯುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮೊಟೋ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಓರ್ವನನ್ನು ಈಗಾಗಲೇ ಬಂಧಿಸಲಾಗಿದೆ.
ಸೂಕ್ತ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಮರಣದಂಡನೆ ಸೇರಿದಂತೆ ಕಠಿಣ ಕ್ರಮ ಆಗುವಂತೆ ನೋಡಿಕೊಳ್ಳಲಾಗುವುದು. ಸಮಾಜದಲ್ಲಿ ಇಂತಹ ಹೇಯ ಕೃತ್ಯಗಳಿಗೆ ಯಾವುದೇ ಸ್ಥಾನವಿಲ್ಲ ಎಂದು ಅವರು ಹೇಳಿದ್ದಾರೆ.
ಅಮಿತ್ ಶಾ ಮಾತುಕತೆ:ಮಹಿಳೆಯರ ವಿಡಿಯೋಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಣಿಪುರ ಸಿಎಂ ಎನ್ ಬಿರೇನ್ ಸಿಂಗ್ ಅವರೊಂದಿಗೆ ಕರೆ ಮಾಡಿ ಮಾತನಾಡಿದರು. ಮಹಿಳೆಯರ ಜೊತೆ ಅಮಾನುಷವಾಗಿ ನಡೆದುಕೊಂಡಿದ್ದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದರು.
'ನನಗೆ ನಿದ್ದೆ ಬರ್ತಿಲ್ಲ':ಮಣಿಪುರ ವಿಡಿಯೋ ನೋಡಿ ನನಗೆ ನಿದ್ರೆ ಬರುತ್ತಿಲ್ಲ. ಘಟನೆ ಎರಡೂವರೆ ತಿಂಗಳ ಹಿಂದೆ ಸಂಭವಿಸಿದೆ. ಆದರೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಬಂಧಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕೇಂದ್ರ ಸರ್ಕಾರ ಮೌನ, ಪ್ರಧಾನಿ ಒಂದೇ ಒಂದು ಹೇಳಿಕೆ ನೀಡದೇ ಇರುವುದು ಸರಿಯಲ್ಲ. ಹಿಂಸಾಚಾರವನ್ನು ಕೊನೆಗೊಳಿಸುವ, ಆರೋಪಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಣಿಪುರ ಸಿಎಂ ಮತ್ತು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಹೇಳಿದರು.
ಸಂಸತ್ತಿನಲ್ಲಿ ಪ್ರತಿಧ್ವನಿ:ಮಣಿಪುರದ ಅಮಾನುಷ ವಿಡಿಯೋ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರಗತಿಧ್ವನಿಸಿತು. ಹಲವಾರು ವಿರೋಧ ಪಕ್ಷಗಳ ಸಂಸದರು ನೋಟಿಸ್ ನೀಡಿದ್ದು, ಮಹಿಳೆಯರಿಬ್ಬರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ಸಂಸದ ಸಂಜಯ್ ಸಿಂಗ್ ನಿಯಮ 267 ರ ಅಡಿಯಲ್ಲಿ ರಾಜ್ಯಸಭೆಯಲ್ಲಿ ಬ್ಯುಸಿನೆಸ್ ನೋಟಿಸ್ ನೀಡಿದ್ದಾರೆ. ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚೆಗೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಸಂಸದರಾದ ಗೌರವ್ ಗೊಗೊಯ್, ಮಾಣಿಕಂ ಟ್ಯಾಗೋರ್ ಮತ್ತು ಎಐಎಂಐಎಂನ ಅಸಾದುದ್ದೀನ್ ಓವೈಸಿ, ಲೋಕಸಭೆಯಲ್ಲಿ, ಈಶಾನ್ಯ ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತು ಚರ್ಚೆಗೆ ಒತ್ತಾಯಿಸಿದರು.
ಸಿಪಿಐ ಸಂಸದ ಬಿನೋಯ್ ವಿಶ್ವಂ, ರಾಷ್ಟ್ರೀಯ ಜನತಾ ದಳದ ಸಂಸದ ಮನೋಜ್ ಝಾ ಮತ್ತು ಕಾಂಗ್ರೆಸ್ ಸಂಸದ ರಂಜೀತ್ ರಂಜನ್ ಅವರು ಮಣಿಪುರದ ಪರಿಸ್ಥಿತಿಯನ್ನು ಚರ್ಚಿಸಲು ಮೇಲ್ಮನೆಯಲ್ಲಿ ನಿಯಮ 267 ರ ಅಡಿಯಲ್ಲಿ ವ್ಯವಹಾರಿಕ ನೋಟಿಸ್ ನೀಡಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಮಣಿಪುರ ಸಂಘರ್ಷದ ಚರ್ಚೆಗಳು ನಡೆಯಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿವೆ.
ಇದನ್ನೂ ಓದಿ:ಮಣಿಪುರದಲ್ಲಿ ಅಮಾನವೀಯ ಕೃತ್ಯ! ಮಹಿಳೆಯರಿಬ್ಬರ ಬೆತ್ತಲೆಗೊಳಿಸಿ ಮೆರವಣಿಗೆ, ತೀವ್ರ ಆಕ್ರೋಶ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ