ಹೈದರಾಬಾದ್:ತೆಲಂಗಾಣದಲ್ಲಿ ಪಾದಯಾತ್ರೆಗೆ ಸರ್ಕಾರ ಅನುಮತಿ ನಿರಾಕರಿಸಿದ್ದನ್ನು ವಿರೋಧಿಸಿ ವೈಎಸ್‌ಆರ್ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಅಧ್ಯಕ್ಷೆ ವೈ ಎಸ್ ಶರ್ಮಿಳಾ ಅವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸದ ಸಂದರ್ಭದಲ್ಲಿ ಅಸ್ವಸ್ಥರಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಇದು ಪೊಲೀಸರ ಬಲವಂತದ ವರ್ಗಾವಣೆ ಎಂದು ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.
ಆಂಧ್ರಪ್ರದೇಶದ ಸಿಎಂ ಜಗನ್ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ರಾಜ್ಯಾದ್ಯಂತ ಪಾದಯಾತ್ರೆಗೆ ಮುಂದಾಗಿದ್ದರು. ಆದರೆ, ಕೆಸಿಆರ್ ಸರ್ಕಾರ ಇದಕ್ಕೆ ಅನುಮತಿ ನೀಡಿಲ್ಲ. ಇದರಿಂದ ಕೆರಳಿದ ವೈಎಸ್‌ಆರ್‌ಟಿಪಿ ಪಕ್ಷ, ಶರ್ಮಿಳಾ ಅವರ ಸಮೇತ ಶುಕ್ರವಾರದಿಂದ ಇಲ್ಲಿನ ಪಕ್ಷದ ಪ್ರಧಾನ ಕಚೇರಿಯಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿತ್ತು.
ಉಪವಾಸ ಸತ್ಯಾಗ್ರಹ ಆರಂಭವಾಗಿ ಮೂರು ದಿನಗಳಾಗಿದ್ದು, ಕೈಬಿಡುವಂತೆ ಪೊಲೀಸರು ಹಲವು ಬಾರಿ ಮನವಿ ಮಾಡಿದ್ದರು. ಇದಕ್ಕೊಪ್ಪದೇ ಶರ್ಮಿಳಾ ಅವರು ಪಟ್ಟುಹಿಡಿದು ನೀರನ್ನೂ ಸೇವಿಸದೇ ಕಠಿಣ ಸತ್ಯಾಗ್ರಹ ನಡೆಸುತ್ತಿದ್ದರು. ಇಂದು ರಾತ್ರಿ 1 ಗಂಟೆಯ ಸುಮಾರಿಗೆ ಪೊಲೀಸರು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ಸತ್ಯಾಗ್ರಹ ಸ್ಥಳದಿಂದ ದೂರ ಸರಿಸಿ, ಶರ್ಮಿಳಾರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.