ಪುರಿ(ಒಡಿಶಾ):ಒಡಿಶಾದ ಗ್ರಾಮವೊಂದಕ್ಕೆ ಕೆಂಪು ಇರುವೆಗಳ ಕಾಟ ಜೋರಾಗಿದೆ. ಕಳೆದ ಎರಡು ತಿಂಗಳಿನಿಂದ ಈ ಕೆಂಪಿರುವೆಗಳು ಜನರು, ಪ್ರಾಣಿಗಳ ಮೇಲೆ ದಾಳಿ ಮಾಡಿ ಸಂಕಷ್ಟಕ್ಕೆ ಸಿಲುಕಿಸಿವೆ. ದಾರಿಯಲ್ಲಿ ಎಲ್ಲೇ ನಡೆದಾಡಿದರೂ ಎದುರಾಗುವ ಇರುವೆಗಳು ಕಚ್ಚಿ ಜನರನ್ನು ಹೈರಾಣು ಮಾಡಿವೆ. ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ದು, ಇದೀಗ ಕೀಟನಾಶಕ ಸಿಂಪಡಣೆಗೆ ಮುಂದಾಗಿದ್ದಾರೆ.
ಒಡಿಶಾದ ಪುರಿ ಜಿಲ್ಲೆಯ ಬ್ರಾಹ್ಮಣಸಾಹಿ ಇರುವೆ ದಾಳಿಗೆ ಒಳಗಾಗಿ ಕಂಗಾಲಾದ ಗ್ರಾಮ. ಇಲ್ಲಿ ಕಳೆದ 3 ತಿಂಗಳಿಂದ ಕೆಂಪು ಇರುವೆಗಳ ದೊಡ್ಡ ಗುಂಪೇ ಇಡೀ ಗ್ರಾಮವನ್ನು ಆವರಿಸಿಕೊಂಡಿದೆ. ಇಷ್ಟು ಸಂಖ್ಯೆಯ ಕೆಂಪು ಇರುವೆಗಳನ್ನು ತಾವು ಹಿಂದೆಂದೂ ಕಂಡಿರಲಿಲ್ಲ. ಇವುಗಳ ದಾಳಿಯಿಂದ ಇನ್ನಿಲ್ಲದ ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಮಣ್ಣಿನ ಮನೆಗಳಲ್ಲಿ ಇರುವೆಗಳ ವಾಸ:ಜನರನ್ನು ಕಡಿದು ಹಿಂಸೆ ನೀಡುತ್ತಿರುವ ಕೆಂಪು ಇರುವೆಗಳು ಗ್ರಾಮದಲ್ಲಿರುವ ಮಣ್ಣಿನ ಮನೆಗಳನ್ನೇ ವಾಸಸ್ಥಾನವನ್ನಾಗಿ ಮಾಡಿಕೊಂಡಿವೆ. ಈ ಮೊದಲು ಹತ್ತಿರದ ಕಾಲುವೆಯ ಭಾಗದಲ್ಲಿ ಕಾಣಿಸುತ್ತಿದ್ದ ಇವು ಇದೀಗ ಗ್ರಾಮಕ್ಕೆ ಲಗ್ಗೆ ಇಟ್ಟಿವೆ.
ಇರುವೆಗಳ ಕಡಿತ, ನೋವು ವಿಪರೀತ:ಗುಂಪು ಗುಂಪಾಗಿ ಬಂದು ದಾಳಿ ಮಾಡುವ ಈ ಕೆಂಪು ಇರುವೆಗಳ ಕಡಿತದಿಂದ ಇಲ್ಲಿನ ಜನ ರೋಸಿ ಹೋಗಿದ್ದಾರೆ. ಕಾಲು, ಕೈ ದೇಹದ ಯಾವುದೇ ಭಾಗಕ್ಕೂ ಇರುವೆ ಕಡಿದ ಬಳಿಕ ದದ್ದುಗಳು ಉಂಟಾಗಿ ಊದಿಕೊಂಡು ತುರಿಕೆ ಬರುತ್ತದೆ. ವಿಪರೀತ ನೋವು ಕಾಣಿಸಿಕೊಂಡು ಕಡಿತಕ್ಕೊಳಗಾದವರು ಇನ್ನಿಲ್ಲದ ಹಿಂಸೆ ಅನುಭವಿಸುತ್ತಿದ್ದಾರೆ.
ಇರುವೆಗಳಿಂದ ಕಾಪಾಡಲು ಜನರ ಮೊರೆ:ಗ್ರಾಮದ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಕಂಡು ಬರುವ ಈ ಇರುವೆಗಳ ಕಾಟದಿಂದ ರೋಸಿ ಹೋಗಿರುವ ಜನರು ಇವುಗಳ ಕಾಟದಿಂದ ಮುಕ್ತಿ ಮಾಡಲು ಜನರು ಅಧಿಕಾರಿಗಳಿಗೆ ಮೊರೆ ಇಟ್ಟಿದ್ದಾರೆ. ಗ್ರಾಮಕ್ಕೆ ಭೇಟಿ ನೀಡಿರುವ ಅಧಿಕಾರಿಗಳೇ ಇರುವೆಗಳ ದಾಳಿಗೆ ಒಳಗಾಗಿದ್ದಾರೆ.