ನವದೆಹಲಿ:ದೇಶದಲ್ಲಿ ಏಕತೆಯನ್ನು ಸಾರುವ ಸಲುವಾಗಿ "ಹರ್ ಘರ್ ತಿರಂಗಾ"ವನ್ನು ಯೋಜಿಸಲಾಗಿದೆ. ಅದರಂತೆ ಆಗಸ್ಟ್ 2 ರಿಂದ 15ರ ವರೆಗೂ ತಾವು ಬಳಸುವ ಸಾಮಾಜಿಕ ಮಾಧ್ಯಮಗಳ ಡಿಪಿಯಲ್ಲಿ (ಫೋಟೋ) ತ್ರಿವರ್ಣ ಧ್ವಜ ಚಿತ್ರವನ್ನು ಪ್ರೊಫೈಲ್ ಆಗಿ ಬಳಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಸಲಹೆ ನೀಡಿದರು.
ಭಾನುವಾರ ತಮ್ಮ ಮಾಸಿಕ ರೇಡಿಯೊ ಪ್ರಸಾರದ 91ನೇ ಸಂಚಿಕೆಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಿಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರದರ್ಶನದ ಚಿತ್ರವಾಗಿ(ಡಿಪಿ) ತ್ರಿವರ್ಣ ಧ್ವಜವನ್ನು ಅಳವಡಿಸಿ. ದೇಶದ ಏಕತೆಯನ್ನು ಎತ್ತಿಹಿಡಿಯಿರಿ ಎಂದು ಕರೆ ನೀಡಿದರು.
ಕ್ರೀಡಾ ಸಾಧಕರಿಗೆ ಅಭಿನಂದನೆ:ವಿವಿಧ ಸ್ಪರ್ಧೆಗಳಲ್ಲಿ ಭಾರತದ ಹೆಸರು ಪ್ರತಿಧ್ವನಿಸುವಂತೆ ಮಾಡಿದ ಕ್ರೀಡಾ ಸಾಧಕರಿಗೆ ಮೋದಿ ಅಭಿನಂದಿಸಿದರು. ಕೆಲ ದಿನಗಳ ಹಿಂದಷ್ಟೇ ಸಿಂಗಾಪುರ ಓಪನ್ ಗೆದ್ದ ಪಿ.ವಿ.ಸಿಂಧು ಮತ್ತು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿಗೆ ಭರ್ಜಿ ಎಸೆದ ನೀರಜ್ ಚೋಪ್ರಾ ಅವರ ಸಾಧನೆಯನ್ನು ಹೊಗಳಿದರು. ಇದಲ್ಲದೇ, ಇಂಗ್ಲೆಂಡ್ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿರುವ ಭಾರತೀಯ ತಂಡಕ್ಕೆ ಶುಭ ಕೋರಿದರು.
ಉತ್ಸವಗಳಲ್ಲಿ ಪಾಲ್ಗೊಳ್ಳಿ:ದೇಶದ ವಿವಿಧೆಡೆ ನಡೆಯುವ ಉತ್ಸವ, ಜಾತ್ರೆಗಳಲ್ಲಿ ಜನರು ಭಾಗವಹಿಸಿ. ಅಲ್ಲಿಗೆ ಭೇಟಿ ನೀಡಿ ಅದರ ಬಗ್ಗೆ ಮಾಹಿತಿ ಪಡೆದು ಇತರರಿಗೆ ಅರಿವು ಮೂಡಿಸಲು ಹ್ಯಾಶ್ಟ್ಯಾಗ್ಗಳನ್ನು ಬಳಸಿ ಪ್ರಚುರಪಡಿಸಿ. ಪ್ರಸ್ತುತ ನಡೆಯುತ್ತಿರುವ ಹಿಮಾಚಲದ ಮಿಂಜಾರ್ ಮೇಳಕ್ಕೆ ಭೇಟಿ ನೀಡಿ ಎಂದು ಸಲಹೆ ನೀಡಿದರು.