ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತೆಲಂಗಾಣದಲ್ಲಿ 11,300 ಕೋಟಿ ರೂಪಾಯಿಗಳ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ಇದೇ ವೇಳೆ ಸಿಕಂದರಾಬಾದ್ - ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ 11.30ಕ್ಕೆ ಹೈದರಾಬಾದ್ಗೆ ಆಗಮಿಸುವ ಅವರು, ಹಲವು ಅಭಿವೃದ್ಧಿ ಕಾರ್ಯಗಳಿಗೆ ಅಡಿಪಾಯ ಹಾಕಲಿದ್ದಾರೆ. ಆ ಬಳಿಕ ಇಲ್ಲಿನ ಪರೇಡ್ ಮೈದಾನದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಧಾನಿ ಮೋದಿ ಬೀಬಿನಗರದ ಏಮ್ಸ್ ಮತ್ತು ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಿಕಂದರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಯ ಅಡಿಪಾಯಕ್ಕೂ ಕೂಡಾ ಇಂದೇ ಚಾಲನೆ ನೀಡಲಿದ್ದಾರೆ. ಸಿಕಂದರಾಬಾದ್-ತಿರುಪತಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಇದು ಹೈದರಾಬಾದ್ ಮತ್ತು ತಿರುಪತಿಯೊಂದಿಗೆ ನೇರ ಸಂಪರ್ಕ ಕಲ್ಪಿಸಲಿದೆ. ಈ ರೈಲು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಸುಮಾರು ಮೂರೂವರೆ ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಮತ್ತು ಯಾತ್ರಿಕ ಪ್ರಯಾಣಿಕರಿಗೆ ವಿಶೇಷವಾಗಿ ಪ್ರಯೋಜನ ಮಾಡಿ ಕೊಡಲಿದೆ.
ಹೊಸ ನಿಲ್ದಾಣದಲ್ಲಿ ಏನೆಲ್ಲ ಇರಲಿವೆ?: 720 ಕೋಟಿ ರೂ. ವೆಚ್ಚದಲ್ಲಿ ಸಿಕಂದರಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ವೇದಿಕೆ ಕಲ್ಪಿಸಲಾಗಿದೆ. ಈ ಮೂಲಕ ವಿಶ್ವ ದರ್ಜೆಯ ಸೌಕರ್ಯಗಳು ಮತ್ತು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗುವ ಐಕಾನಿಕ್ ಸ್ಟೇಷನ್ ಕಟ್ಟಡದೊಂದಿಗೆ ಬೃಹತ್ ಬದಲಾವಣೆ ಮಾಡಲು ಯೋಜಿಸಲಾಗಿದೆ. ಮರು ಅಭಿವೃದ್ಧಿಪಡಿಸಿದ ನಿಲ್ದಾಣವು ಒಂದೇ ಸ್ಥಳದಲ್ಲಿ ಎಲ್ಲಾ ಪ್ರಯಾಣಿಕರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲಿದೆ. ವಿಶಾಲವಾದ ಮೇಲ್ಛಾವಣಿ ಪ್ಲಾಜಾ ಹೊಂದಲಿದ್ದು, ಬಹು-ಮಾದರಿ ಸಂಪರ್ಕದೊಂದಿಗೆ ಇತರ ಮಾರ್ಗಗಳಲ್ಲಿ ಪ್ರಯಾಣಿಕರನ್ನು ರೈಲುಗಳಿಂದ ಇತರ ಮಾರ್ಗಗಳಿಗೆ ತಡೆರಹಿತ ವರ್ಗಾವಣೆ ಅವಕಾಶವನ್ನು ಕಲ್ಪಿಸಲಿದೆ.
ಪ್ರಧಾನಿ ಮೋದಿ ಅವರ ಭೇಟಿ ವೇಳೆ, ಹೈದರಾಬಾದ್-ಸಿಕಂದರಾಬಾದ್ ಅವಳಿ ನಗರ ಪ್ರದೇಶದ ಉಪನಗರ ವಿಭಾಗದಲ್ಲಿ 13 ಹೊಸ ಮಲ್ಟಿ - ಮೋಡಲ್ ಟ್ರಾನ್ಸ್‌ಪೋರ್ಟ್ ಸರ್ವಿಸ್ (ಎಂಎಂಟಿಎಸ್) ಸೇವೆಗಳನ್ನು ಫ್ಲ್ಯಾಗ್-ಆಫ್ ಮಾಡಲಿದ್ದಾರೆ. ಪ್ರಯಾಣಿಕರಿಗೆ ವೇಗದ, ಅನುಕೂಲಕರ ಮತ್ತು ಆರಾಮದಾಯಕ ಪ್ರಯಾಣದ ಆಯ್ಕೆಯನ್ನು ಒದಗಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ರೈಲ್ವೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.