ನವದೆಹಲಿ: ಭಾರತದಲ್ಲಿ ಒಮಿಕ್ರಾನ್ ತಳಿ ವೈರಸ್‌ನ ಆತಂಕ ನಿಧಾನವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವರ ಮಂಡಳಿ ಜತೆ ಇಂದು ಕೋವಿಡ್ ಸ್ಥಿತಿಗತಿಗಳ ಪರಾಮರ್ಶೆ ಸಭೆ ನಡೆಸಲಿದ್ದಾರೆ.
ಮೂಲಗಳ ಪ್ರಕಾರ, ಇಂದು ಸಂಜೆ ವರ್ಚುವಲ್ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ, ಕೊರೊನಾ ಮೂರನೇ ಅಲೆ ತಡೆಗಟ್ಟುವ ವ್ಯಾಪಕ ಕ್ರಮಗಳ ಕುರಿತು ಅವರು ಚರ್ಚಿಸಲಿದ್ದಾರೆ. ಇದರ ಜೊತೆಗೆ, ರಸ್ತೆ ಮತ್ತು ಸಾರಿಗೆ ಸಚಿವಾಲಯ ಹಾಗೂ ನಾಗರಿಕ ವಿಮಾನಯಾನ ಮತ್ತು ಟೆಲಿಕಾಂ ಸಚಿವಾಲಯಗಳು ಮಾಡಿದ ಕೆಲಸವನ್ನು ಸಹ ಸಭೆಯಲ್ಲಿ ಪರಿಶೀಲಿಸಬಹುದು.
ಕಳೆದೊಂದು ವಾರದ ಹಿಂದೆ ಕೋವಿಡ್-19 ವೈರಸ್ ತಡೆಗಟ್ಟಲು ತೆಗೆದುಕೊಂಡ ಸಿದ್ಧತೆಯ ಕುರಿತು ಪರಿಶೀಲನಾ ಸಭೆ ನಡೆಸಿದ್ದರು. ಈ ವೇಳೆ ಕೋವಿಡ್ ನಿಯಂತ್ರಣಕ್ಕಾಗಿ ಔಷಧಿ ಲಭ್ಯತೆ, ಆಮ್ಲಜನಕ ಸಿಲಿಂಡರ್‌ಗಳು, ವೆಂಟಿಲೇಟರ್‌ಗಳು, ಪಿಎಸ್‌ಎ ಪ್ಲಾಂಟ್‌ಗಳು, ಐಸಿಯು ಹಾಸಿಗೆಗಳು, ಮಾನವ ಸಂಪನ್ಮೂಲಗಳು ಹಾಗೂ ವ್ಯಾಕ್ಸಿನೇಷನ್ ಸ್ಥಿತಿಗತಿ ಸೇರಿದಂತೆ ಆರೋಗ್ಯ ಮೂಲಸೌಕರ್ಯ ಬಲಪಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ್ದರು.
ಎಲ್ಲಾ ಹಂತಗಳಲ್ಲಿ ಉನ್ನತ ಮಟ್ಟದ ಜಾಗರೂಕತೆಯನ್ನು ಕಾಯ್ದುಕೊಳ್ಳುವಂತೆ ಮೋದಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ನಿಯಂತ್ರಣ ಮತ್ತು ನಿರ್ವಹಣೆಯ ಸಾರ್ವಜನಿಕ ಆರೋಗ್ಯ ಕ್ರಮಗಳ ಪ್ರಯತ್ನಗಳನ್ನು ಬೆಂಬಲಿಸಲು ರಾಜ್ಯಗಳೊಂದಿಗೆ ನಿಕಟ ಸಮನ್ವಯದಿಂದ ಕೆಲಸ ಮಾಡುವಂತೆ ಸೂಚಿಸಿದ್ದರು.