ಚೆನ್ನೈ (ತಮಿಳುನಾಡು): ಹಲವು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚೆನ್ನೈಗೆ ಭೇಟಿ ನೀಡಿದ್ದರು. ಶನಿವಾರ ತಮ್ಮ ಚೆನ್ನೈ ಭೇಟಿಯ ಕೊನೆಯಲ್ಲಿ ಅವರು ವಿಕಲಚೇತನನಾಗಿರುವ ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ತಿರು ಎಸ್. ಮಣಿಕಂದನ್ ಅವರನ್ನು ಭೇಟಿ ಮಾಡಿ ಅವರೊಂದಿಗೆ 'ಸೆಲ್ಫಿ' ತೆಗೆದುಕೊಂಡರು. ಅದನ್ನು ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, "ಒಂದು ವಿಶೇಷ ಸೆಲ್ಫಿ. ಚೆನ್ನೈನಲ್ಲಿ ನಾನು ತಿರು ಎಸ್. ಮಣಿಕಂದನ್ ಅವರನ್ನು ಭೇಟಿ ಮಾಡಿದ್ದೇನೆ. ಅವರು ಈರೋಡ್‌ನ ಹೆಮ್ಮೆಯ ಕಾರ್ಯಕರ್ತರಾಗಿದ್ದು, ಬೂತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೊಗಳಿದ್ದಾರೆ.
"ವಿಕಲಚೇತನ ವ್ಯಕ್ತಿಯಾದರೂ ಅವರು ತಮ್ಮದೇ ಆದ ಅಂಗಡಿಯನ್ನು ನಡೆಸುತ್ತಾರೆ ಮತ್ತು ಹೆಚ್ಚು ಪ್ರೇರೇಪಿಸುವ ಅಂಶವೆಂದರೆ ಅವರು ತಮ್ಮ ದೈನಂದಿನ ಲಾಭದ ಹೆಚ್ಚಿನ ಭಾಗವನ್ನು ಬಿಜೆಪಿಗೆ ನೀಡುತ್ತಾರೆ. ಮಣಿಕಂದನ್ ನಮ್ಮ ಪಕ್ಷದ ಹೆಮ್ಮೆಯ ಕಾರ್ಯಕರ್ತ. ಅವರಂತಹ ವ್ಯಕ್ತಿಗಳನ್ನು ಹೊಂದಿರುವ ಪಕ್ಷದಲ್ಲಿ ನಾನು ಕಾರ್ಯಕರ್ತರಾಗಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಇದೆ. ಅವರ ಜೀವನ ಪಯಣವು ನಮ್ಮ ಪಕ್ಷ ಮತ್ತು ಸಿದ್ಧಾಂತಕ್ಕೆ ಅವರ ಬದ್ಧತೆಯನ್ನು ಪ್ರೇರೇಪಿಸುತ್ತದೆ. ಅವರ ಮುಂದಿನ ಪ್ರಯತ್ನಗಳಿಗೆ ನನ್ನ ಶುಭಾಶಯಗಳು" ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ವಿವಿಧ ಕಾಮಗಾರಿಗಳಿಗೆ ಚಾಲನೆ:ಶನಿವಾರ ತಮಿಳುನಾಡಿನ ಚೆನ್ನೈನಲ್ಲಿ ಪ್ರಧಾನಿ ಮೋದಿ ಸುಮಾರು 5,200 ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ನಿನ್ನೆ ಚಾಲನೆ ನೀಡಿದ್ದರು. ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು ತಮ್ಮ ಸರ್ಕಾರ ಗಡುವುಗಳೊಂದಿಗೆ ಕೆಲಸ ಮಾಡುತ್ತದೆ ಮತ್ತು ಅಂತಿಮ ದಿನಾಂಕದ ಮುಂಚೆಯೇ ಫಲಿತಾಂಶಗಳನ್ನು ನೀಡುತ್ತದೆ ಎಂದರು. ಎರಡು ವಿಷಯಗಳು ಸರ್ಕಾರದ ಸಾಧನೆಗಳನ್ನು ಸಾಧ್ಯವಾಗಿಸಿದೆ. ಅದು ಕೆಲಸದ ಸಂಸ್ಕೃತಿ ಮತ್ತು ದೂರದೃಷ್ಟಿ. ನಮ್ಮ ತೆರಿಗೆದಾರರು ಪಾವತಿಸುವ ಪ್ರತಿ ರೂಪಾಯಿಗೆ ನಾವು ಜವಾಬ್ದಾರರಾಗಿರುತ್ತೇವೆ ಎಂದು ಹೇಳಿದರು.