ನವದೆಹಲಿ: "ನಾನು ವಿದೇಶಗಳಲ್ಲಿ ಭೇಟಿಯಾದ ಎಲ್ಲ ನಾಯಕರು, ಮಾತುಕತೆ ನಡೆಸಿದ ಮಹತ್ವದ ಗಣ್ಯ ವ್ಯಕ್ತಿಗಳು ಭಾರತ ಜಿ 20 ಅಧ್ಯಕ್ಷ ಸ್ಥಾನ ಅಲಂಕರಿಸಿರುವುದಕ್ಕೆ ಭಾರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ದೇಶದ ಪ್ರತಿ ನಾಗರಿಕನಿಗೂ ಅಪಾರ ಹೆಮ್ಮೆ ತರುವ ಸಂಗತಿ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಇದೇ ವೇಳೆ, "ದೇಶದ ಒಳಿತಿಗೋಸ್ಕರ ನಾನು ಸಮಯ ಬಳಸಿದ್ದೇನೆ" ಎಂದು ಅವರು ತಿಳಿಸಿದರು.
ಮೂರು ದೇಶಗಳ ಪ್ರವಾಸದಿಂದ ದೆಹಲಿಯ ಪಾಲಂ ವಿಮಾನ ನಿಲಾದಣಕ್ಕೆ ಬಂದಿಳಿದ ಪ್ರಧಾನಿಗೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ನೀಡಿದರು. ಪ್ರಧಾನಿ ಈ ಪ್ರವಾಸದಲ್ಲಿ ಜಪಾನ್, ಪಪುವಾ ನ್ಯೂಗಿನಿ ಹಾಗು ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದಾರೆ.
"ಇಂದು ಜಗತ್ತು ಭಾರತದ ಯೋಚನೆಯನ್ನು ತಿಳಿಯ ಬಯಸುತ್ತಿದೆ. ದೇಶದ ಶ್ರೇಷ್ಠ ಸಂಸ್ಕೃತಿ, ಸಂಪ್ರದಾಯಗಳ ಕುರಿತು ಮಾತನಾಡುವಾಗ ಭಾರತೀಯರು 'ಜೀತ ಮನಸ್ಥಿತಿ'ಯಿಂದ ಬಳಲಬಾರದು, ಧೈರ್ಯದಿಂದ ಮಾತನಾಡಬೇಕು" ಎಂದು ಮೋದಿ ಇದೇ ವೇಳೆ ಸಲಹೆ ನೀಡಿದರು. ಕೋವಿಡ್ 19 ಸಂದರ್ಭದಲ್ಲಿ ವಿವಿಧ ದೇಶಗಳಿಗೆ ಲಸಿಕೆ ಪೂರೈಸಿದ ಬಗೆಗಿನ ವಿರೋಧಿಗಳ ಟೀಕಿಗೆ ಪ್ರತ್ಯುತ್ತರ ನೀಡಿದ ಅವರು, "ಇದು ಮಹಾತ್ಮ ಬುದ್ಧ, ಮಹಾತ್ಮ ಗಾಂಧಿ ಹುಟ್ಟಿದ ನಾಡು ಎಂಬುದನ್ನು ನಾವು ಮರೆಯಬಾರದು. ನಾವು ವೈರಿಗಳ ಬಗೆಗೂ ಕಾಳಜಿ ವಹಿಸುತ್ತೇವೆ. ನಾವು ಅನುಕಂಪದಿಂದ ಪ್ರೇರಣೆ ಪಡೆದವರು" ಎಂದರು.
ಪ್ರವಾಸದ ಬಳಿಕ ಮೋದಿ ಯಾವುದೇ ವಿಶ್ರಾಂತಿ ತೆಗೆದುಕೊಳ್ಳದೇ ಇಂದು ಸಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲಿದ್ದಾರೆ. ಇದಕ್ಕೂ ಮುನ್ನ, 6 ದಿನಗಳ ವಿದೇಶ ಪ್ರವಾಸ ಮುಗಿಸಿ ತವರಿಗೆ ಹಿಂದಿರುಗಿದ ಮೋದಿಯನ್ನು ಬರಮಾಡಿಕೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಬಳಿಕ ಮಾತನಾಡಿದ ಜೆ.ಪಿ.ನಡ್ಡಾ, "ಮೋದಿ ಆಡಳಿತದ ಮಾದರಿಯನ್ನು ಇಡೀ ಜಗತ್ತು ಮೆಚ್ಚುತ್ತಿದೆ. ವಿಶ್ವಾದ್ಯಂತ ಭಾರತದ ಗೌರವ ಹೆಚ್ಚಿದೆ. ಅಮೆರಿಕದ ಅಧ್ಯಕ್ಷರೇ ಮೋದಿ ಅವರ ಹತ್ತಿರ ಆಟೋಗ್ರಾಫ್ ಕೇಳಿದರು. ಪಪುವಾ ನ್ಯೂಗಿನಿ ದೇಶದ ಪ್ರಧಾನಿ ಮೋದಿಯವರ ಪಾದಮುಟ್ಟಿ ನಮಸ್ಕರಿಸಿದರು. ಇದು ಭಾರತಕ್ಕೆ ಸಿಕ್ಕ ಗೌರವ. ಮೋದಿ ನಾಯಕತ್ವದಲ್ಲಿ ಜಗತ್ತು ಭಾರತವನ್ನು ಹೇಗೆ ನೋಡುತ್ತಿದೆ ಎಂಬುದನ್ನು ತೋರಿಸುತ್ತದೆ" ಎಂದು ಸಂತಸ ವ್ಯಕ್ತಪಡಿಸಿದರು.
ಇಂದಿನ ಪ್ರಧಾನಿ ಮೋದಿ ಕಾರ್ಯಕ್ರಮ: ರಾಷ್ಟ್ರ ರಾಜಧಾನಿ ತಲುಪಿದ ಒಂದೆರಡು ಗಂಟೆಗಳಲ್ಲಿ ಪ್ರಧಾನಿ ಮೊದಲ ಅಧಿಕೃತ ಸಭೆಯನ್ನು ಇಂದು ಬೆಳಗ್ಗೆ 9 ಗಂಟೆಗೆ ನಡೆಸಲು ನಿರ್ಧರಿಸಿದ್ದಾರೆ ಎಂದು ಪ್ರಧಾನ ಮಂತ್ರಿ ಕಚೇರಿಯ ಉನ್ನತ ಮೂಲಗಳು ತಿಳಿಸಿವೆ. 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಡೆಹ್ರಾಡೂನ್‌ನಿಂದ ದೆಹಲಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಬಳಿಕ, ದಿನವಿಡೀ ಇತರೆ ಸಭೆಗಳಲ್ಲಿ ಪಾಲ್ಗೊಳ್ಳುವರು. ನಾಳೆ ಸಂಜೆ 7 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2022 ರ ಉದ್ಘಾಟನೆ ಕಾರ್ಯ ನೆರವೇರಿಸಲಿದ್ದಾರೆ.
ಇದನ್ನೂ ಓದಿ :ಅಂದು ನೆಹರು... ಇಂದು ಮೋದಿ... ಸೆಂಗೋಲ್ ಚಿನ್ನದ ರಾಜದಂಡದ ಐತಿಹಾಸಿಕ ಹಿನ್ನೆಲೆ ತಿಳಿಯಿರಿ
ಮೋದಿ ವಿದೇಶ ಪ್ರವಾಸ ಹೀಗಿತ್ತು..: ಕಳೆದ ಶುಕ್ರವಾರ (ಮೇ 19 ರಂದು) ಮೋದಿ ದೆಹಲಿಯಿಂದ ಜಪಾನ್‌ಗೆ ತೆರಳಿದ್ದರು. ಅಲ್ಲಿಂದ ಭಾನುವಾರ ಪಪುವಾ ನ್ಯೂಗಿನಿ ತಲುಪಿ ನಂತರ ಆಸ್ಟ್ರೇಲಿಯಾಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ 12 ಕ್ಕೂ ಹೆಚ್ಚು ಜಾಗತಿಕ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಮೂರು ಶೃಂಗಸಭೆಗಳಲ್ಲಿ ಭಾಗವಹಿಸಿದ್ದರು. ಜಪಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಹಲವಾರು ವಿಶ್ವ ನಾಯಕರನ್ನು ಭೇಟಿ ಮಾಡಿ, ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಮೋದಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.