ನವದೆಹಲಿ:ಉತ್ತರ ಪ್ರದೇಶ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯಗಳು ಉಲ್ಬಣಗೊಂಡಿದ್ದರೆ ಇತ್ತ ಹಿರಿಯ ನಾಗರಿಕರಿಗಾಗಿ ಹೊಸ ಯೋಜನೆ ಜಾರಿ ಮಾಡಿದ್ದಕ್ಕಾಗಿ ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಹೊಗಳಿದ್ದಾರೆ.
ರಾಜ್ಯದ ವೃದ್ಧರಿಗೆ ಆರೈಕೆ, ಕಾನೂನು ಮತ್ತು ಆರೋಗ್ಯ ಬೆಂಬಲವನ್ನು ನೀಡುವ ಗುರಿಯನ್ನು ಹೊಂದಿರುವ ಯೋಜನೆಯಾಗಿ ಟೋಲ್-ಫ್ರೀ ಸಹಾಯವಾಣಿ ‘ಎಲ್ಡರ್ಲೈನ್’ (Elderline) ಸ್ಕೀಮ್ ಅನ್ನು ಮೇ 14 ರಂದು ಉತ್ತರ ಪ್ರದೇಶದಲ್ಲಿ ಪ್ರಾರಂಭಿಸಲಾಯಿತು. ಆ ಬಳಿಕ 14567 ಟೋಲ್-ಫ್ರೀ ಸಂಖ್ಯೆಗೆ ಅನೇಕ ಕರೆಗಳು ಬರುತ್ತಿದ್ದು, ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವ ಕುರಿತು ಮಾಧ್ಯಮವೊಂದು ಮಾಡಿದ ವರದಿಯನ್ನು ಮೋದಿ ಪೋಸ್ಟ್ ಮಾಡಿ ''ತುಂಬಾ ಒಳ್ಳೆಯ ಹೆಜ್ಜೆ'' ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಯೋಗಿ ಹುಟ್ಟುಹಬ್ಬಕ್ಕೆ ಶುಭಾಶಯ ಕೋರದ ಪ್ರಧಾನಿ.. ಹಿಂದಿರುವ ಕಾರಣವೇನು?
ಪಿಎಂ ಮೋದಿಯವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಆದಿತ್ಯನಾಥ್, "ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮತ್ತು ಸಬ್ ಕಾ ವಿಶ್ವಾಸ್ ಮಂತ್ರವನ್ನು ಅನುಸರಿಸುವ ಮೂಲಕ ರಾಜ್ಯ ಸರ್ಕಾರವು ವೃದ್ಧರಿಗೆ ಸಹಾಯ ಮಾಡುವ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡಲು ಸಮರ್ಥವಾಗಿದೆ. ರಾಜ್ಯದ ಜನರ ಪರವಾಗಿ ನಿಮ್ಮ ಪ್ರಶಂಸೆಗಾಗಿ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುವೆ" ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಯುಪಿ ಬಿಜೆಪಿಯಲ್ಲಿ ಮುಸುಕಿನ ಗುದ್ದಾಟ: ಮೋದಿ ಭೇಟಿ ಮಾಡಿದ ಯೋಗಿ
ಮುಂದಿನ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನವೇ ಉತ್ತರ ಪ್ರದೇಶದಲ್ಲಿ ಕ್ಯಾಬಿನೆಟ್ ವಿಸ್ತರಣೆ ಅಥವಾ ಪುನರ್‌ರಚನೆ ವಿಚಾರದಲ್ಲಿ ಬಿಜೆಪಿ ನಾಯಕರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಸಿಎಂ ಬದಲಾವಣೆಯಾಗಬೇಕೆಂಬ ಕೂಗೂ ಕೇಳಿ ಬಂದಿತ್ತು. ಅಲ್ಲದೇ ಕೋವಿಡ್ ಅಸಮರ್ಪಕ ನಿರ್ವಹಣೆ ವಿಚಾರವಾಗಿ ಹಾಗೂ ಗಂಗೆಯಲ್ಲಿ ಹೆಣಗಳು ತೇಲಿಬಂದು ಸರ್ಕಾರವನ್ನು ಟೀಕಿಸಲಾಗಿತ್ತು. ಈ ಬಾರಿ ಯೋಗಿ ಹುಟ್ಟುಹಬ್ಬಕ್ಕೆ ಕೂಡ ಮೋದಿ ಶುಭಕೋರಿರಲಿಲ್ಲ. ಮೂರು ದಿನಗಳ ಹಿಂದೆ ಯೋಗಿ ದೆಹಲಿಗೆ ತೆರಳಿ ಗೃಹ ಸಚಿವ ಅಮಿತ್ ಶಾ ಹಾಗೂ ಪಿಎಂ ಮೋದಿಯನ್ನು ಭೇಟಿಯಾಗಿದ್ದರರು. ಇದರ ಬೆನ್ನಲ್ಲೇ ಈಗ ಪ್ರಧಾನಿ ಪ್ರಶಂಸೆಗೆ ಯೋಗಿ ಪಾತ್ರರಾಗಿದ್ದಾರೆ.