ಹೈದರಾಬಾದ್: ಟೋಕಿಯೊ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಚೀನಾದ ಹೀ ಬಿಂಗ್ ಜಿಯಾವೊ ಅವರನ್ನು ಮಣಿಸಿ ಕಂಚಿನ ಪದಕ ಪಡೆದಿದ್ದಾರೆ. ಸಿಂಧುವಿನ ಈ ಸಾಧನೆಗೆ ಪ್ರಧಾನಿ ಮೋದಿ ಸೇರಿದಂತೆ ದೇಶದ ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಪಿ.ವಿ.ಸಿಂಧು ಭಾರತದ ಹೆಮ್ಮೆ. ಅವರ ಅದ್ಭುತ ಬ್ಯಾಡ್ಮಿಂಟನ್ ಆಟದಿಂದ ನಾವೆಲ್ಲರೂ ಹರ್ಷಗೊಂಡಿದ್ದೇವೆ. ಟೋಕಿಯೊ 2020 ರಲ್ಲಿ ಕಂಚು ಗೆದ್ದಿದ್ದಕ್ಕೆ ಆಕೆಗೆ ಅಭಿನಂದನೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಿ.ವಿ.ಸಿಂಧು ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದಿರುವ ಭಾರತದ ಮೊದಲ ಮಹಿಳೆ. ಇಂದಿನ ಪಂದ್ಯದಲ್ಲಿ ಅವರು ಕಂಚಿನ ಪದಕ ಗೆದ್ದಿದ್ದಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶ್ಲಾಘಿಸಿದ್ಧಾರೆ.
ಇದನ್ನೂ ಓದಿ : Tokyo Olympics: ಕಂಚಿನ ಪದಕಕ್ಕೆ ಮುತ್ತಿಕ್ಕಿದ 'ಬೆಳ್ಳಿ ಹುಡುಗಿ' ಪಿ.ವಿ. ಸಿಂಧು
ಪಿ.ವಿ. ಸಿಂಧು ಗೆಲುವಿನ ನಂತರ ಮಾತನಾಡಿದ ಆಕೆಯ ತಂದೆ ಪಿ.ವಿ. ರಮಣ, ಸಿಂಧು ಪದಕ ಗೆದ್ದರೆ ನನ್ನ ಜತೆ ಐಸ್ ಕ್ರೀಂ ತಿನ್ನಬಹುದು ಎಂದು ಪ್ರಧಾನಿ ಮೋದಿ ಹೇಳಿದ್ದರು. ಇದೀಗ ನನ್ನ ಮಗಳು ಪದಕ ಗೆದ್ದಿದ್ದು, ಮೋದಿ ಜತೆ ಐಸ್ಕ್ರೀಂ ತಿನ್ನಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.