ತ್ರಿಶೂರ್(ಕೇರಳ):ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಿಗ್ಗೆ ಪ್ರಸಿದ್ಧ ಗುರುವಾಯೂರು ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀಕೃಷ್ಣನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ನಂತರ ದೇಗುಲದಲ್ಲೇ ನಿಗದಿಯಾಗಿದ್ದ ಕೇರಳದ ಜನಪ್ರಿಯ ಸಿನಿಮಾ ನಟ ಸುರೇಶ್ ಗೋಪಿ ಅವರ ಮಗಳ ಮದುವೆ ಸಮಾರಂಭದಲ್ಲಿ ಭಾಗಿಯಾದರು. ನವ ದಂಪತಿಗೆ ಹಾರ ನೀಡಿದ ಪ್ರಧಾನಿ ಆಶೀರ್ವದಿಸಿದರು. ಈ ವೇಳೆ ಕೇರಳದ ಸಿನಿಮಾ ಕಲಾವಿದರನ್ನು ಮೋದಿ ಭೇಟಿ ಮಾಡಿದರು.
ಇದಾದ ಬಳಿಕ, ತ್ರಿಶೂರ್ ಜಿಲ್ಲೆಯ ತ್ರಿಪ್ರಯಾರ್ ಶ್ರೀರಾಮ ಸ್ವಾಮಿ ದೇವಾಲಯಕ್ಕೂ ತೆರಳಿ ದರ್ಶನ ಪಡೆದರು.
ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ (ಸಿಎಸ್ಎಲ್) ಹೊಸ ಡ್ರೈ ಡಾಕ್ (ಎನ್‌ಡಿಡಿ) ಮತ್ತು 4,000 ಕೋಟಿ ರೂ.ಗೂ ಹೆಚ್ಚು ವೆಚ್ಚದ ಮೂರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.
ಮಂಗಳವಾರ ಸಂಜೆ ಕೇರಳಕ್ಕೆ ಆಗಮಿಸಿದ್ದ ಮೋದಿ ಅವರನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನೆಡುಂಬಸ್ಸೆರಿ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು. ಬಳಿಕ ಮೋದಿ ಮಹಾರಾಜ ಕಾಲೇಜು ಮೈದಾನದಿಂದ ಸರ್ಕಾರಿ ಅತಿಥಿ ಗೃಹದವರೆಗೆ ಅದ್ಧೂರಿ ರೋಡ್ ಶೋ ನಡೆಸಿದರು. 1.3 ಕಿಲೋಮೀಟರ್ ರೋಡ್ ಶೋ ಸಂದರ್ಭದಲ್ಲಿ ರಸ್ತೆಯ ಎರಡೂ ಬದಿಗಳಲ್ಲಿ ಬಿಜೆಪಿ ಬೆಂಬಲಿಗರು ಸೇರಿದಂತೆ ಸಾವಿರಾರು ಜನರು ಹೂ, ಹೂಮಾಲೆಗಳು ಮತ್ತು ಪಕ್ಷದ ಧ್ವಜಗಳೊಂದಿಗೆ ಸಾಲುಗಟ್ಟಿ ನಿಂತಿದ್ದರು.
ಮಂಗಳವಾರ ಪ್ರಧಾನಿ ಆಂಧ್ರಪ್ರದೇಶದ ಲೇಪಾಕ್ಷಿಯಲ್ಲಿರುವ ವೀರಭದ್ರ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ರಾಮಾಯಣ ಮಹತ್ವದ ಸ್ಥಳ ಇದಾಗಿದೆ.
ಇನ್ನು, ಎರಡು ವಾರಗಳ ಅವಧಿಯಲ್ಲಿ ಕೇರಳಕ್ಕಿದು ಪ್ರಧಾನಿಯವರ 2ನೇ ಭೇಟಿಯಾಗಿದೆ. ಇತ್ತೀಚಿಗೆ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದಲ್ಲಿ 1,150 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದರು. ಆ ಬಳಿಕ ತ್ರಿಶೂರ್ ಜಿಲ್ಲೆಯಲ್ಲಿ ಬಿಜೆಪಿ ಆಯೋಜಿಸಿದ್ದ ಮಹಿಳಾ ಸಮಾವೇಶದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ:ಪೊಂಗಲ್ ಹಬ್ಬದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ: ವಿಡಿಯೋ