ನವದೆಹಲಿ: 10 ತಿಂಗಳ ಅವಧಿಯಲ್ಲಿ ಕೋವಿಡ್ ಲಸಿಕೆಯ 100 ಕೋಟಿಗೂ ಅಧಿಕ ಡೋಸ್ ನೀಡುವ ಮೂಲಕ ಭಾರತ ಮೈಲಿಗಲ್ಲು ಸಾಧಿಸಿದ್ದು, ಆರೋಗ್ಯ ಕಾರ್ಯಕರ್ತರ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 82ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತ ನಮ್ಮ ಆರೋಗ್ಯ ಕಾರ್ಯಕರ್ತರಿಗೆ ಸೆಲ್ಯೂಟ್ ಮಾಡುತ್ತದೆ. ನನ್ನ ದೇಶ, ನನ್ನ ದೇಶದ ಜನರ ಸಾಮರ್ಥ್ಯಗಳ ಬಗ್ಗೆ ನನಗೆ ಚೆನ್ನಾಗಿ ತಿಳಿದಿದೆ. ನಮ್ಮ ಆರೋಗ್ಯ ಕಾರ್ಯಕರ್ತರು ನಮ್ಮ ದೇಶವಾಸಿಗಳಿಗೆ ಲಸಿಕೆ ಹಾಕುವಲ್ಲಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆಂದು ಎಂದು ನನಗೆ ತಿಳಿದಿತ್ತು ಎಂದು ಹೇಳಿದರು.
100 ಕೋಟಿಗೂ ಹೆಚ್ಚು ಕೋವಿಡ್-19 ಲಸಿಕೆಯ ಡೋಸ್ ನೀಡಿದ ಬಳಿಕ ಭಾರತ ಹೊಸ ಉತ್ಸಾಹ, ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ. ನಮ್ಮ ಲಸಿಕಾ ಕಾರ್ಯಕ್ರಮದ ಯಶಸ್ಸು ಭಾರತದ ಸಾಮರ್ಥ್ಯವನ್ನು ತೋರಿಸುತ್ತದೆ, ಪ್ರತಿಯೊಬ್ಬರ ಪ್ರಯತ್ನದ ಶಕ್ತಿಯನ್ನು ತೋರಿಸುತ್ತದೆ ಎಂದರು.
ಡ್ರೋನ್‌ಗಳ ಸಹಾಯದಿಂದ ಹಳ್ಳಿಗಳಲ್ಲಿ ಡಿಜಿಟಲ್ ಭೂ ದಾಖಲೆ:
ಈ ವರ್ಷ ಆಗಸ್ಟ್ 25 ರಂದು, ದೇಶವು ಪ್ರಸ್ತುತ ಮತ್ತು ಭವಿಷ್ಯದ ಸಾಧ್ಯತೆಗಳಿಗೆ ಅನುಗುಣವಾಗಿ ಹೊಸ ಡ್ರೋನ್ ನೀತಿಯನ್ನು ತಂದಿತು. ಡ್ರೋನ್ ವಲಯವು ಹಲವಾರು ನಿರ್ಬಂಧಗಳು ಮತ್ತು ನಿಬಂಧನೆಗಳಿಂದ ತುಂಬಿತ್ತು. ಇದು ಹೊಸ ಡ್ರೋನ್ ನೀತಿಯಿಂದ ಬದಲಾಗಿದೆ. ದೇಶದಲ್ಲಿ ಹೊಸ ಡ್ರೋನ್ ನೀತಿಯು ಈಗಾಗಲೇ ಉತ್ತಮ ಫಲಿತಾಂಶಗಳನ್ನು ತೋರಿಸುತ್ತಿದೆ ಎಂದು ತಿಳಿಸಿದರು.