ಅಯೋಧ್ಯೆ (ಉತ್ತರ ಪ್ರದೇಶ):ವಿಶ್ವವಿಖ್ಯಾತ ಭವ್ಯ ರಾಮಮಂದಿರ ಉದ್ಘಾಟನೆಗೂ ಮೊದಲು ವಿಮಾನ ನಿಲ್ದಾಣದ ಮಾದರಿಯಲ್ಲಿ ನವೀಕರಿಸಲಾಗಿರುವ ಇಲ್ಲಿನ ಅಯೋಧ್ಯೆ ಧಾಮ ರೈಲ್ವೆ ಜಂಕ್ಷನ್, ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಉದ್ಘಾಟಿಸಿದರು.
ವಿವಿಧ ಕಾರ್ಯಕ್ರಮಗಳಿಗಾಗಿ ಉತ್ತರಪ್ರದೇಶದ ಅಯೋಧ್ಯೆಗೆ ಬಂದಿರುವ ಪ್ರಧಾನಿ ಅವರಿಗೆ ಮೊದಲು ಭವ್ಯ ಸ್ವಾಗತ ಕೋರಲಾಯಿತು. ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ರಾಜ್ಯಪಾಲೆ ಆನಂದಿ ಬೆನ್, ಸಿಎಂ ಯೋಗಿ ಆದಿತ್ಯನಾಥ್ ಅವರು ಸ್ವಾಗತಿಸಿದರು. ಬಳಿಕ ಅಯೋಧ್ಯೆಯಲ್ಲಿ ರೋಡ್ ಶೋ ನಡೆಸಲಾಯಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಪ್ರಧಾನಿಗೆ ಪುಷ್ಟವೃಷ್ಟಿ ಸುರಿಸಿದರು.
ರೈಲು ನಿಲ್ದಾಣ ಲೋಕಾರ್ಪಣೆ:ವಿಮಾನ ನಿಲ್ದಾಣದ ಮಾದರಿಯಲ್ಲಿ ನವೀಕರಿಸಲಾಗಿರುವ ಅಯೋಧ್ಯೆ ಧಾಮ್ ಜಂಕ್ಷನ್ ರೈಲು ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು. ನಿಲ್ದಾಣದ ಕಟ್ಟಡವು ಲಿಫ್ಟ್‌ಗಳು, ಎಸ್ಕಲೇಟರ್‌ಗಳು, ಫುಡ್ ಪ್ಲಾಜಾಗಳು, ಪೂಜಾ ಸಾಮಗ್ರಿಗಳ ಅಂಗಡಿಗಳು, ಕ್ಲೋಕ್ ರೂಮ್‌ಗಳು, ಮಕ್ಕಳ ಆರೈಕೆ ಕೊಠಡಿಗಳು ಹಾಗೂ ವಿಶ್ರಾಂತಿ ಕೊಠಡಿಗಳು ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಇದು ಹೊಂದಿದೆ.
ಉದ್ಘಾಟನೆಯ ಬಳಿಕ ನಿಲ್ದಾಣವನ್ನು ಸುತ್ತು ಹಾಕಿದ ಪ್ರಧಾನಿ ಮೋದಿ, ಅಲ್ಲಿನ ಸೊಬಗನ್ನು ಕಣ್ತುಂಬಿಕೊಂಡರು. ರಾಜ್ಯಪಾಲೆ ಆನಂದಿ ಬೆನ್ ಪಟೇಲ್, ಸಿಎಂ ಯೋಗಿ ಆದಿತ್ಯನಾಥ್, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಈ ವೇಳೆ ಜೊತೆಗಿದ್ದರು.
ರೈಲುಗಳಿಗೆ ಚಾಲನೆ:ಇದೇ ವೇಳೆ ನಿಲ್ದಾಣದಿಂದಲೇ 2 ಅಮೃತ್ ಭಾರತ್, 6 ವಂದೇ ಭಾರತ್ ರೈಲುಗಳಿಗೆ ಚಾಲನೆ ಕೂಡ ನೀಡಿದರು. ಅಮೃತ್ ಭಾರತ್ ರೈಲಿನಲ್ಲಿ ತೆರಳಿದ ಅವರು ಅಲ್ಲಿದ್ದ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳನ್ನು ಮಾತನಾಡಿಸಿದರು.