ನವದೆಹಲಿ:2019ರಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ಸೆರೆಹಿಡಿದು ಚಿತ್ರಹಿಂಸೆಗೆ ಒಳಪಡಿಸಿರುವ ವಿಷಯ ಎಲ್ಲಿರಿಗೂ ಗೊತ್ತಿದೆ. ಈ ಬೆಳವಣಿಗೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿತ್ತು. ಈ ಕ್ರಮದಲ್ಲಿ ಅಂದಿನ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಲು ಪ್ರಯತ್ನಿಸಿದ್ದರು. ಆದರೆ ಅದಕ್ಕೆ ಮೋದಿ ನಿರಾಸಕ್ತಿ ವ್ಯಕ್ತಪಡಿಸಿದ್ದರು. ಪಾಕಿಸ್ತಾನದಲ್ಲಿರುವ ಭಾರತದ ಮಾಜಿ ಹೈಕಮಿಷನರ್ ಅಜಯ್ ಬಿಸಾರಿಯಾ ಅವರು ತಮ್ಮ ಪುಸ್ತಕದಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಸಂಬಂಧಗಳ ಕುರಿತು ಅವರ ಪುಸ್ತಕ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಪುಲ್ವಾಮಾ ದಾಳಿಯ ನಂತರ ಉಭಯ ದೇಶಗಳ ನಡುವೆ ಯಾವ ರೀತಿಯ ಉದ್ವಿಗ್ನತೆ ಉಂಟಾಗಿದೆ?, ಭಾರತದ ರಾಜತಾಂತ್ರಿಕ ನೀತಿಗಳಿಗೆ ಪಾಕಿಸ್ತಾನ ಹೇಗೆ ಹೆದರುತ್ತಿದೆ?, ಭಯೋತ್ಪಾದನೆಯ ಕುರಿತಾದ ತಮ್ಮ ನೀತಿಗಳನ್ನು ಅವರು ಹೇಗೆ ಬದಲಾಯಿಸಬೇಕಾಯಿತು? ಎಂಬುದೂ ಸೇರಿದಂತೆ ಮುಂತಾದ ವಿಷಯಗಳನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ಕೆಲವನ್ನು ರಾಷ್ಟ್ರೀಯ ಮಾಧ್ಯಮ ಸಂಸ್ಥೆಯೊಂದು ಬಹಿರಂಗಪಡಿಸಿದೆ.
ಫೆಬ್ರವರಿ 27ರಂದು ಅಭಿನಂದನ್ ವರ್ಧಮಾನ್ ಅವರನ್ನು ಪಾಕಿಸ್ತಾನ ವಶಪಡಿಸಿಕೊಂಡ ನಂತರ ಭಾರತವು ತೀವ್ರವಾಗಿ ಪ್ರತಿಕ್ರಿಯಿಸಿತು. ವೈರಿ ದೇಶದ ಮೇಲೆ 9 ಕ್ಷಿಪಣಿಗಳನ್ನು ಹಾರಿಸಲು ಭಾರತ ಸಿದ್ಧಗೊಂಡಿತು. ಈ ವಿಷಯ ತಿಳಿದ ಪಾಕ್ ತುಂಬಾ ಹೆದರಿತ್ತು. ಆ ಸಮಯದಲ್ಲಿ ಭಾರತದಲ್ಲಿರುವ ಪಾಕಿಸ್ತಾನದ ಹೈಕಮಿಷನರ್ ಸೊಹೈಲ್ ಮೊಹಮ್ಮದ್ ಇಸ್ಲಾಮಾಬಾದ್‌ನಲ್ಲಿದ್ದರು. ಅವರು ಫೆಬ್ರವರಿ 27 ರ ಮಧ್ಯರಾತ್ರಿ ನನ್ನನ್ನು ಸಂಪರ್ಕಿಸಿದರು. ಇಮ್ರಾನ್ ಖಾನ್ ಅವರು ಮೋದಿ ಅವರೊಂದಿಗೆ ಫೋನ್‌ನಲ್ಲಿ ಮಾತನಾಡಲು ಬಯಸುತ್ತಿದ್ದಾರೆ ಎಂದು ಹೇಳಿದರು. ಕೂಡಲೇ ದೆಹಲಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಆಗ ಖಾನ್ ಅವರೊಂದಿಗೆ ಮಾತನಾಡಲು ಪ್ರಧಾನಿ ಮೋದಿ ಲಭ್ಯವಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಪಾಕಿಸ್ತಾನಕ್ಕೆ ಯಾವುದೇ ತುರ್ತು ಪರಿಸ್ಥಿತಿ ಇದ್ದರೆ ಹೈಕಮಿಷನರ್ (ನನ್ನ) ಜೊತೆ ಮಾತನಾಡಲು ಸೂಚಿಸಲಾಗಿತ್ತು. ಅದರ ನಂತರ ಪಾಕಿಸ್ತಾನದ ಅಧಿಕಾರಿಗಳು ಮತ್ತೆ ನನ್ನನ್ನು ಸಂಪರ್ಕಿಸಲಿಲ್ಲ ಎಂದು ಅಜಯ್ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.