ನವದೆಹಲಿ: ನಿಶ್ಚಿತಾರ್ಥದ ನಂತರ ಯುವಕನೊಬ್ಬ ಭಾವಿ ಪತ್ನಿಯ ಮೇಲೆ ಅತ್ಯಾಚಾರ ಎಸಗಿ ಹಲ್ಲೆ ನಡೆಸಿದ್ದ ಪ್ರಕರಣದಲ್ಲಿ ಯುವಕನ ಜಾಮೀನು ಅರ್ಜಿ ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. ಈ ಸಂಬಂಧದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ನಿಶ್ಚಿತಾರ್ಥವಾದ ಮಾತ್ರಕ್ಕೆ ಭಾವಿ ಪತ್ನಿ ಅಥವಾ ಮದುವೆಯಾಗಲಿರುವ ಯುವತಿಯೊಂದಿಗೆ ಸಂಬಂಧ ಹೊಂದಲು ಅಥವಾ ಹಲ್ಲೆ ಮಾಡಲು ಅನುಮತಿ ಇದೆ ಎಂದು ಪರಿಗಣಿಸಲು ಬರುವುದಿಲ್ಲ ಎಂದು ತನ್ನ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಜಾಮೀನು ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಸ್ವರ್ಣಾ ಕಾಂತ್ ಶರ್ಮಾ, ಮದುವೆಯನ್ನು ನಿಶ್ಚಯಿಸಿರುವುದರಿಂದ ಎರಡೂ ಕಡೆಯವರು ಒಪ್ಪಿಗೆ ನೀಡುವ ಸಾಧ್ಯತೆ ಇರುತ್ತದೆ ಎಂದೇ ಭಾವಿಸಲಾಗುತ್ತದೆ. ಆದರೆ ನಿಶ್ಚಿತಾರ್ಥದ ನಂತರ ಲೈಂಗಿಕವಾಗಿ ಬಳಸಿಕೊಳ್ಳುವ ಹಾಗೂ ಆಕೆಯ ಮೇಲೆ ಹಕ್ಕು ಸಾಧಿಸುವ ಯಾವುದೇ ಹಕ್ಕನ್ನು ವರನಿಗೆ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು.
ಗರ್ಭಿಣಿಯಾದ ಬಳಿಕ ಗರ್ಭಪಾತ ಮಾಡಿಸಿ, ಮದುವೆ ನಿರಾಕರಣೆ: ಹುಡುಗ - ಹುಡುಗಿ ಒಂದು ವರ್ಷ ಸಂಬಂಧ ಹೊಂದಿದ್ದರು. ಅಕ್ಟೋಬರ್ ಟಟ ರಂದು ಪರಸ್ಪರ ಮನೆಯವರ ಒಪ್ಪಿಗೆಯೊಂದಿಗೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ನಿಶ್ಚಿತಾರ್ಥವಾದ ನಾಲ್ಕು ದಿನಗಳ ಬಳಿಕ ಯುವಕ, ಯುವತಿಯೊಂದಿಗೆ ಬಲವಂತದ ಲೈಂಗಿಕ ಸಂಪರ್ಕ ಕೂಡಾ ಮಾಡಿದ್ದ. ಈ ಸಂದರ್ಭದಲ್ಲಿ ಯುವಕ ನಾವಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿರುವುದರಿಂದ ಶೀಘ್ರವೇ ಮದುವೆ ಮಾಡಿಕೊಳ್ಳುತ್ತಿದ್ದೇವೆ ಏನೂ ಆಗುವುದಿಲ್ಲ ಎಂದು ವಧುವನ್ನು ಒಪ್ಪಿಸಿದ್ದ.
ಇದಾದ ಬಳಿಕ ಯುವಕ ಯುವತಿಯೊಂದಿಗೆ ಹಲವು ಬಾರಿ ಮಿಲನ ಕ್ರಿಯೆ ನಡೆಸಿದ್ದ. ಹೀಗಾಗಿ ಯುವತಿ ಗರ್ಭಿಣಿಯಾಗಿದ್ದಳು. ಈ ವಿಚಾರ ಗೊತ್ತಾಗಿ ಯುವಕ ಗರ್ಭಪಾತಕ್ಕೆ ಮಾತ್ರೆಗಳನ್ನೂ ನೀಡಿದ್ದಾನೆ. ಇದಾದ ಬಳಿಕ 9 ಜುಲೈ 2022 ರಂದು ಯುವತಿ ಯುವಕನ ಮನೆಗೆ ಹೋದಾಗ ಈ ಎಲ್ಲ ವಿಚಾರ ಮನೆಯವರಿಗೆ ಗೊತ್ತಾಗಿ, ಮನೆಯವರು ಮದುವೆಗೆ ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿ ಅನಿವಾರ್ಯವಾಗಿ ಜುಲೈ 16 ರಂದು ದಕ್ಷಿಣ ದೆಹಲಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಜುಲೈ 22ರಂದು ಯುವಕನನ್ನು ಬಂಧಿಸಿದ್ದರು.