ಲಖನೌ (ಉತ್ತರ ಪ್ರದೇಶ): ಅಖಿಲ ಭಾರತೀಯ ಅಖಾಢಾ ಪರಿಷತ್ (ಎಬಿಎಪಿ) ಮುಖ್ಯಸ್ಥ ಮಹಾಂತ್ ನರೇಂದ್ರ ಗಿರಿ ಅವರ ನಿಗೂಢ ಸಾವಿನ ಕುರಿತು ಸಿಬಿಐ ತನಿಖೆ ನಡೆಸುವಂತೆ ಕೋರಿ ಅಲಹಾಬಾದ್ ಹೈಕೋರ್ಟ್ಗೆ ವಕೀಲ ಸುನೀಲ್ ಚೌಧರಿ ಅರ್ಜಿ ಸಲ್ಲಿಸಿದ್ದಾರೆ.
ಸೋಮವಾರ ಸಂಜೆ ಮಹಾಂತ್ ಶವವಾಗಿ ಪತ್ತೆಯಾಗಿದ್ದು, ಅವರ ಸಾವು ಅನುಮಾನಾಸ್ಪದ ಮತ್ತು ನಿಗೂಢವಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಮಹಾಂತ್ ನರೇಂದ್ರ ಗಿರಿ ಬರೆದಿದ್ದಾರೆ ಎನ್ನಲಾದ ಐದು ಪುಟಗಳ ಡೆತ್ನೋಟ್ ಬಗ್ಗೆ ಅಖಾಢಾದ ಸದಸ್ಯರು ಸಂಶಯ ವ್ಯಕ್ತಪಡಿಸಿದ್ದಾರೆ.
ಮಹಾಂತ್ ನರೇಂದ್ರ ಗಿರಿ ಪತ್ರದಲ್ಲಿ ಉಲ್ಲೇಖಿಸಿದ್ದ ಶಿಷ್ಯ ಆನಂದ್ ಗಿರಿಯನ್ನು ಪೊಲೀಸರು ಹರಿದ್ವಾರದಲ್ಲಿ ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ಈವರೆಗೆ ಆನಂದ್ ಗಿರಿ, ಹನುಮಾನ್ ದೇವಸ್ಥಾನದ ಅರ್ಚಕ ಆದ್ಯಾ ತಿವಾರಿ ಮತ್ತು ಆತನ ಮಗ ಸಂದೀಪ್ ತಿವಾರಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.