ಹೈದರಾಬಾದ್ :ತೆಲಂಗಾಣದ ಜನತೆ ಓವೈಸಿ ಮತ್ತು ಟಿಆರ್ಎಸ್ನ ಆಡಳಿತದಿಂದ ಬೇಸತ್ತು ಕೋಪಗೊಂಡಿದ್ದಾರೆ. ಹಾಗಾಗಿ, ಈ ಬಾರಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಮೇಯರ್ ಆಗಿ ಆಯ್ಕೆ ಮಾಡಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭವಿಷ್ಯ ನುಡಿದ್ದಾರೆ.
ಭಾನುವಾರ ಚುನಾವಣಾ ಪ್ರಚಾರಕ್ಕೆ ಹೈದರಾಬಾದ್ಗೆ ಆಗಮಿಸಿದ ಅಮಿತ್ ಶಾ ಓಲ್ಡ್ ಸಿಟಿಯ ಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು. ಬಳಿಕ ಪ್ರಚಾರಕ್ಕೆ ಇಳಿದ ಶಾ ಇಲ್ಲಿನ ಜನರು ಉತ್ತಮ ಆಡಳಿತವನ್ನು ಬಯಸುತ್ತಿದ್ದಾರೆ. ಅವರಿಗೆ ಮೋದಿ ಅವರ ನಾಯಕತ್ವದ ಮೇಲೆ ಮತ್ತು ಬಿಜೆಪಿ ಬಗ್ಗೆ ನಂಬಿಕೆ ಇದೆ ಎಂದರು.
ನಾಳೆ ವಾರಣಾಸಿಗೆ ಪ್ರಧಾನಿ ಮೋದಿ: ಭದ್ರತಾ ಸಿಬ್ಬಂದಿಯಿಂದ ಕಟ್ಟೆಚ್ಚರ
ಲೋಕಸಭಾ ಚುನಾವಣೆಯ ವೇಳೆ ತೆಲಂಗಾಣದ ಜನರು ಮೋದಿ ಅವರನ್ನು ಬೆಂಬಲಿಸಿದ್ದಾರೆ. (2019ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ತೆಲಂಗಾಣದಿಂದ ನಾಲ್ಕು ಸ್ಥಾನ ಗೆದ್ದಿದೆ). ಬದಲಾವಣೆಯ ಯುಗ ಪ್ರಾರಂಭವಾಗಿದೆ. ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆ ಬದಲಾವಣೆಗೆ ಮುಂದಿನ ನಿಲ್ದಾಣವಾಗಿದೆ ಎಂದು ಶಾ ಹೇಳಿದರು.
ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಚುನಾವಣೆ ಪ್ರಚಾರದ ಕೊನೆಯ ದಿನವಾದ ಇಂದು, ಸಿಕಂದರಾಬಾದ್‌ನಲ್ಲಿ ನಡೆದ ರೋಡ್ ಶೋವೊಂದರಲ್ಲಿ ಭಾಗವಹಿಸಿ ಅಮಿತ್ ಶಾ ಮಾತನಾಡಿದರು.
ಬಿಜೆಪಿಯ ಅಭ್ಯರ್ಥಿ ನಗರದ ಮೇಯರ್ ಆಗಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಶಾ, ಕಳೆದ ಹಲವಾರು ವರ್ಷಗಳಿಂದ ಹೈದರಾಬಾದ್‌ನಲ್ಲಿ ಮೂಲಸೌಕರ್ಯಗಳ ಕೊರತೆಯಿದೆ ಎಂದು ಆರೋಪಿಸಿದರು. ಜಿಹೆಚ್‌ಎಂಸಿಗೆ ಮತದಾನ ಡಿಸೆಂಬರ್ 1ರಂದು ನಡೆಯಲಿದ್ದು, ಡಿಸೆಂಬರ್ 4ರಂದು ಮತ ಎಣಿಕೆ ನಡೆಯಲಿದೆ.