ಪರ್ಭಾನಿ (ಮಹಾರಾಷ್ಟ್ರ):ಕೊರೊನಾದಿಂದ ಹೇರಿದ ಲಾಕ್ಡೌನ್ ಪರಿಣಾಮ ಅನೇಕ ವಿದ್ಯಾವಂತರು ತಮ್ಮ ಕೆಲಸಕಳೆದುಕೊಂಡು ನಿರುದ್ಯೋಗಿಗಳಾದರು. ವಿವಿಧ ವ್ಯವಹಾರಗಳಲ್ಲಿ ಕುಸಿತ ಕಂಡ ಪರಿಣಾಮ ಕಾರ್ಮಿಕ ವರ್ಗಕ್ಕೆ ದೊಡ್ಡ ಹೊಡೆತ ನೀಡಿತು. ಅಲ್ಲದೇ ಅನೇಕ ವ್ಯಾಪಾರಿಗಳ ಜೀವನ ಸಂಕಷ್ಟಕ್ಕೆ ಸಿಲುಕಿತು. ಆದರೆ ಇಲ್ಲೊಬ್ಬ ಯುವಕ ಇದೇ ಲಾಕ್ಡೌನ್ ಅನ್ನು ಒಂದು ಅವಕಾಶವಾಗಿ ತೆಗೆದುಕೊಂಡರು. ತಮ್ಮ ಬಾಲ್ಯದ ಹವ್ಯಾಸವನ್ನೇ ಉದ್ಯೋಗವಾಗಿ ಪರಿವರ್ತಿಸಿಕೊಂಡರು.
ಸಣ್ಣ-ಸಣ್ಣ ಬೆಣಚು ಕಲ್ಲುಗಳಿಗೆ ಚೈತನ್ಯವನ್ನು ತರುವ ಮತ್ತು ಅವುಗಳ ಮೂಲಕ ವಿವಿಧ ಸಂದೇಶಗಳನ್ನು ರವಾನಿಸುವ ಕಲೆ ವಿದೇಶದಲ್ಲಿ ವ್ಯಾಪಕವಾಗಿ ಅಭಿವೃದ್ಧಿ ಹೊಂದಿದೆ. ಭಾರತದ ಕೆಲವು ಭಾಗಗಳಲ್ಲಿಯೂ ಕೆಲವು ಕಲಾವಿದರು ಪೆಬೆಲ್ ಆರ್ಟ್ ಮೂಲಕ ಜನರ ಮನಸೆಳೆಯುತ್ತಿದ್ದಾರೆ. ಬೆಣಚು ಕಲ್ಲುಗಳನ್ನು ಬಳಸಿಕೊಂಡು ಪ್ರಹ್ಲಾದ್ ಕೊರೊನಾ ಜಾಗೃತಿ ಮೂಡಿಸುವ ಕಲಾಕೃತಿಗಳನ್ನು ರಚಿಸಿದ್ದಾರೆ. ಪ್ರಹ್ಲಾದ್ ಅವರ ಕಲಾಕೃತಿಗಳಿಗೆ ಅನೇಕ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.