ಕೋಲ್ಕತ್ತಾ (ಪಶ್ಚಿಮ ಬಂಗಾಳ) :ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಗುಣಮುಖರಾಗಿದ್ದಾರೆ. ಕ್ಯಾನ್ಸರ್ ಖಾಯಿಲೆಯೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ತಪಾಸಣೆ ನಡೆಸಿದಾಗ ದೇಹದ ಬಲ ಭಾಗದಲ್ಲಿರಬೇಕಾದ ಯಕೃತ್ ಎಡಬದಿಯಲ್ಲಿರುವುದು ಗೊತ್ತಾಗಿದೆ. ಕೋಲ್ಕತ್ತಾ ಸರ್ಕಾರಿ ಆಸ್ಪತ್ರೆಯ ವೈದ್ಯರು ಸವಾಲಿನ ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಗೆ ಮರುಜೀವ ನೀಡಿದ್ದಾರೆ.
ಕೃಷ್ಣ ಬಿಡ್ ಎಂಬ ಮಹಿಳೆಯೇ ಆಸ್ಪತ್ರೆಯಿಂದ ಗುಣಮುಖರಾಗಿ ಬಂದವರು. ಈಕೆ ಮೂಲತಃ ಪುರುಲಿಯಾದ ರಘುನಾಥಪುರದವರು. ಇವರಿಗೆ ಇತ್ತೀಚೆಗೆ ತೀವ್ರ ಹೊಟ್ಟೆ ನೋವು ಕಂಡುಬಂದಿತ್ತು. ಮಹಿಳೆ ಸ್ಥಳೀಯ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿದ್ದು ಯಾವುದೇ ಪ್ರಯೋಜನ ಆಗಿರಲಿಲ್ಲ. ಅಂತಿಮವಾಗಿ ಕೋಲ್ಕತ್ತಾದಲ್ಲಿರುವ ನಿಲ್ ರತನ್ ಸಿರ್ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ದಾಖಲಾಗಿದ್ದರು. ಇವರನ್ನು ಶಸ್ತ್ರ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಡಾ. ಉಪ್ಪಲ್ ಅವರು ತಪಾಸಣೆ ನಡೆಸಿದ್ದರು.
ಈ ಸಂದರ್ಭದಲ್ಲಿ ದೇಹದ ಎಡಭಾಗದಲ್ಲಿರಬೇಕಾದ ಯಕೃತ್ ಬಲಭಾಗದಲ್ಲಿರುವುದು ಕಂಡುಬಂದಿದೆ. ಇದರಿಂದಾಗಿ ವೈದ್ಯರಿಗೆ ಮತ್ತೊಂದು ಸವಾಲು ಎದುರಾಗಿತ್ತು. ಇನ್ನೂ ಹೆಚ್ಚಿನ ತಪಾಸಣೆ ನಡೆಸಿದಾಗ ಮಹಿಳೆಯು ಕರುಳಿನ ಕ್ಯಾನ್ಸರ್ನಿಂದ ಬಳಲುತ್ತಿರುವುದು ತಿಳಿದುಬಂದಿದೆ. ವಿವಿಧ ಪರೀಕ್ಷೆಗಳನ್ನು ನಡೆಸಿದ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದ್ದಾರೆ.
ಶೀಘ್ರದಲ್ಲೇ ಕ್ಯಾನ್ಸರ್ಗೆ ಶಸ್ತ್ರಚಿಕಿತ್ಸೆ ನಡೆಸದಿದ್ದರೆ ಈ ಕಾಯಿಲೆಯು ಇನ್ನಷ್ಟು ಮಾರಣಾಂತಿಕವಾಗುವ ಸಾಧ್ಯತೆ ಇತ್ತು. ಹಾಗಾಗಿ, ಕೂಡಲೇ ಶಸ್ತ್ರಚಿಕಿತ್ಸೆ ನಡೆಸಬೇಕಿತ್ತು. ಶಸ್ತ್ರಚಿಕಿತ್ಸೆಗೆ ಮುಂದಾದರೂ ಆಕೆಯ ದೇಹದ ರಚನೆಯು ವೈದ್ಯರಿಗೆ ಸವಾಲಾಗಿ ಪರಿಣಮಿಸಿತ್ತು. ಆದರೂ ಛಲ ಬಿಡದ ವೈದ್ಯರು ಕೊನೆಗೂ ಮಹಿಳೆಗೆ ಅತ್ಯಂತ ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಕ್ಯಾನ್ಸರ್ಗೆ ತುತ್ತಾಗಿದ್ದ ಅಂಗವನ್ನು ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಉತ್ಪಾಲ್ ಡೇ ಮಾತನಾಡಿ, "ಮಹಿಳೆಯ ಶಸ್ತ್ರಚಿಕಿತ್ಸೆಯು ಅಂಗ ರಚನಾಶಾಸ್ತ್ರಕ್ಕೆ ವಿರುದ್ಧವಾಗಿದ್ದರಿಂದ ಚಿಕಿತ್ಸೆ ತುಂಬಾ ಸವಾಲಿನದ್ದಾಗಿತ್ತು. ಶಸ್ತ್ರಚಿಕಿತ್ಸೆಯನ್ನು ಅತ್ಯಂತ ಎಚ್ಚರಿಕೆಯಿಂದ ನಡೆಸಲಾಗಿದೆ. ಇಂತಹ ಪ್ರಕರಣಗಳನ್ನು ಸಿಟಸ್ ಇನ್ವರ್ಸಸ್ ಪಾರ್ಟಿಯಾಲಿಸ್ (Situs Inversus Partialis) ಎಂದು ಕರೆಯುತ್ತೇವೆ. ಈ ಅಂಗರಚನೆಯಲ್ಲಿನ ವೈರುಧ್ಯದ ಜೊತೆಗಿನ ಕರುಳಿನ ಕ್ಯಾನ್ಸರ್ ಪ್ರಪಂಚದಾದ್ಯಂತ ಕೇವಲ 15 ರೋಗಿಗಳಲ್ಲಿ ಕಂಡುಬಂದಿದೆ. ಭಾರತದಲ್ಲಿ ಇದು ಎರಡನೇ ಪ್ರಕರಣ. ಈ ರೋಗವು 2 ಲಕ್ಷ ಜನರಲ್ಲಿ ಒಬ್ಬರಿಗೆ ಕಂಡುಬರುತ್ತದೆ" ಎಂದು ಇದೇ ವೇಳೆ ವೈದ್ಯರು ವಿವರ ನೀಡಿದರು.
"ನಾನು ಇಲ್ಲಿಗೆ ಬಂದಾಗ ನನ್ನ ಯಕೃತ್ತು ಬಲಭಾಗದಲ್ಲಿರುವುದು ಗೊತ್ತಾಯಿತು. ವೈದ್ಯರು ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ ಮರು ಜೀವ ನೀಡಿದ್ದಾರೆ. ನಾನು ಈಗ ಆರೋಗ್ಯವಾಗಿದ್ದೇನೆ" ಎಂದು ಕೃಷ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :30ರ ವ್ಯಕ್ತಿಗೆ 13 ತಿಂಗಳ ಮೃತ ಮಗುವಿನ ಮೂತ್ರಪಿಂಡ ಕಸಿ: ಫೋರ್ಟಿಸ್ ಆಸ್ಪತ್ರೆ ವೈದ್ಯರಿಂದ ವಿಶ್ವದಲ್ಲೇ ಅಪರೂಪದ ಚಿಕಿತ್ಸೆ!